ಬೆಂಗಳೂರು :ಯೋಗರಾಜ್ ಭಟ್ಟರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಇಬ್ಬರು ದಿಗ್ಗಜ ಸ್ಟಾರ್ಸ್ ನಟಿಸಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ಸಿನಿಮಾವಾಗಿದೆ. ಈ ಚಿತ್ರದ ಮುಹೂರ್ತ ಇಂದು ಬೆಂಗಳೂರಿನ ರಾಕ್ ಲೈನ್ ವೆಂಕಟೇಶ್ ಸ್ಟುಡಿಯೋದಲ್ಲಿರುವ ದೇವಸ್ಥಾನದಲ್ಲಿ ನೆರವೇರಿತು.
ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿ ಹೊಸ ಬಗೆಯ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಸದ್ಯಕ್ಕೆ ಪ್ರೊಡಕ್ಷನ್ ನಂ 27 ಎಂದು ಹೆಸರಿಡಲಾಗಿದೆ.
ಮಹೂರ್ತ ಸಮಾರಂಭಕ್ಕೆ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಹಾಜರಿದ್ದರು. ರಾಕ್ ಲೈನ್ ಸ್ಟುಡಿಯೋದಲ್ಲಿರುವ ದೇವಸ್ಥಾನದಲ್ಲೇ ಸಿನಿಮಾದ ಮುಹೂರ್ತ ನಡೆಯಿತು. ಮೊದಲ ಬಾರಿಗೆ ಶಿವರಾಜ್ ಕುಮಾರ್ ಜೊತೆ ಪ್ರಭುದೇವ ನಡೆಸುತ್ತಿದ್ದರೂ, ಇಂದು ಅವರು ಮುಹೂರ್ತಕ್ಕೆ ಹಾಜರಾಗಿರಲಿಲ್ಲ. ಬೇರೊಂದು ಕಾರ್ಯದಲ್ಲಿ ಅವರು ಬ್ಯುಸಿ ಆಗಿರುವುದರಿಂದ ವಿಡಿಯೋ ಸಂದೇಶವೊಂದನ್ನು ಅವರು ಕಳುಹಿಸಿದ್ದಾರೆ.