ಇದೀಗ ಯಾಯಾತಿ ಕಾದಂಬರಿಗೆ ಎಲ್ಲಿಲ್ಲದ ಬೇಡಿಕೆ. ಯಾವ ಪುಸ್ತಕ ಮಳಿಗೆಯಲ್ಲೂ ಯಾಯಾತಿ ಪುಸ್ತಕ ಹುಡುಕಿದರೂ ಸಿಗದಷ್ಟು ಡಿಮ್ಯಾಂಡ್. ಜನ ಈ ಪರಿ ಪುಸ್ತಕ ಕೊಳ್ಳಲು ಕಾರಣವಾಗಿದ್ದು ಬಿ ಎಸ್ ಯಡಿಯೂರಪ್ಪರ ಪುಸ್ತಕ ಪ್ರೇಮ ! ಈ ವಿಚಾರವನ್ನು ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
“ನಮ್ಮ ತಂದೆಯವರಿಗೆ ಓದುವ ಆಸಕ್ತಿ ಹೆಚ್ಚು, ಬಿಡುವಿನ ಸಮಯದಲ್ಲಿ ಪುಸ್ತಕಗಳ ಜೊತೆ ಕಾಲ ಕಳೆಯುವಂತೆ ಸಲಹೆ ನೀಡುತ್ತಾರೆ. ಅವರು ಓದಿದ ಪುಸ್ತಕಗಳ ಬಗ್ಗೆ ನಮಗೂ ತಿಳಿಸುತ್ತಾರೆ, ಪುಸ್ತಕಗಳು ನೀಡುವ ಮಾಹಿತಿ ಸಣ್ಣದಲ್ಲ. ಅವುಗಳಿಂದ ತಿಳಿಯುವಂತಹ ವಿಷಯ ಸಾಕಷ್ಟಿರುತ್ತದೆ. ಪುಸ್ತಕಗಳು ಮನುಷ್ಯನ ಮೇಲೆ ಅಗಾಧವಾದ ಪ್ರಭಾವ ಬೀರುತ್ತದೆ. ಪುಸ್ತಕ ಸಂಸ್ಕೃತಿ ಬೆಳೆಯಬೇಕು, ಇದು ಇಂದಿನ ಕಾಲಮಾನಕ್ಕೆ ಅಗತ್ಯವಾಗಿದೆ” ಎಂದರು.
ಸದಾ ಮೀಟಿಂಗ್, ಜನತಾ ದರ್ಶನ ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಆ್ಯಕ್ಟೀವ್ ಆಗಿರುತ್ತಿದ್ದ ಸಿಎಂ ಬಿ ಎಸ್ ಯಡಿಯೂರಪ್ಪ ಇದೀಗ ಪುಸ್ತಕಗಳನ್ನು ಓದುವ ಮೂಲಕ ನಾಡಿನ ಜನತೆಯ ಗಮನ ಸೆಳೆದಿದ್ದಾರೆ. ತಮ್ಮ ಭದ್ರತಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದ ಸಿಎಂ ಬಿ ಸ್ ಯಡಿಯೂರಪ್ಪ ಸಮಯ ಕಳೆಯಲು ಓದಿನ ಗೀಳನ್ನು ಪ್ರಾರಂಭಿಸಿದ್ದರು. ಯಯಾತಿ ಪುಸ್ತಕ ಓದುವ ಮುಖಾಂತರ ತಮ್ಮ ಕ್ವಾರಂಟೈನ್ ಕಾಲ ಕಳೆಯುತ್ತಿದ್ದರು. ಇದರ ಬಗ್ಗೆ ಬಿ ಎಸ್ ವೈ ಪುತ್ರ ವಿಜಯೇಂದ್ರ ಯಡಿಯೂರಪ್ಪ ತಮ್ಮ ತಂದೆಯ ಪುಸ್ತಕ ಪ್ರೇಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ರಾಜಕಾರಣಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಸಂಸ್ಕಾರ ಹೆಚ್ಚಾಗುತ್ತದೆ. ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವವರು ರಾಜಕಾರಣಿಗಳು ಪುಸ್ತಕಗಳನ್ನು ಓದುವುದು ಉತ್ತಮ ಬೆಳವಣಿಗೆ. ಇವರೆಲ್ಲಾ ತಾವು ಓದಿದ ಪುಸ್ತಕಗಳ ಬಗ್ಗೆ ಅಭಿಪ್ರಾಯವನ್ನು ಮುದ್ರಿಸಬೇಕು. ಇದರಿಂದ ಪುಸ್ತಕದ ಪ್ರಚಾರದ ಜೊತೆ ವ್ಯಾಪರವೂ ಹೆಚ್ಚಾಗುತ್ತದೆ ಎಂದು ಖ್ಯಾತ ಕಾದಂಬರಿಕಾರ ಎಸ್. ಎಲ್ ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.