ಬೆಂಗಳೂರು: ಇತ್ತೀಚೆಗೆ ಖಾಸಗಿ ಹೋಟೆಲ್ ನಲ್ಲಿ ಎರಡು ಸಜೀವ ಗುಂಡುಗಳು ಪತ್ತೆಯಾಗಿದ್ದವು, ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಹೋಟೆಲ್ ನಲ್ಲಿ ಗುಂಡುಗಳನ್ನು ಹೂತಿಟ್ಟಿದ್ದ ಮಹಿಳೆಯನ್ನು ಪತ್ತೆಹಚ್ಚಿದ್ದಾರೆ.
ಡಿ. 17 ರಂದು ಯಲಹಂಕದ ಖಾಸಗಿ ಹೋಟೆಲ್ ನ ಕಾರು ಪಾರ್ಕಿಂಗ್ ನಲ್ಲಿ ಹೋಟೆಲ್ ನ ಹೌಸ್ ಕೀಪರ್ ಗೆ ಸಜೀವ ಗುಂಡು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಸಿಕ್ಕ ಗುಂಡು ಸಿಂಗಲ್ ಬ್ಯಾರಲ್ ಗನ್ ನಲ್ಲಿ ಬಳಸುವ ಗುಂಡು ಎಂದು ತಿಳಿದು ಬಂದಿತ್ತು. ಬಳಿಕ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಹೋಟೆಲ್ ನ ಮೂಲೆ ಮೂಲೆಯನ್ನೂ ಹುಡುಕಾಡಿದ್ದರು. ಈ ವೇಳೆ ಅವರಿಗೆ ಮತ್ತೊಂದು ಗುಂಡು ಸಿಕ್ಕಿತ್ತು.
ಇದನ್ನೂ ಓದಿ: ಎಂಇಎಸ್ ಜೊತೆ ಕಾಂಗ್ರೆಸ್ ಕೈಜೋಡಿಸಿರೋ ಗುಮಾನಿ ಇದೆ… ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ…
ಎರಡು ಸಜೀವ ಗುಂಡುಗಳು ಪತ್ತೆಯಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಗುಂಡುಗಳನ್ನು ಹೂತಿಟ್ಟಿದ್ದವರಿಗಾಗಿ ಹುಡುಕಾಟ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಗುಂಡುಗಳನ್ನು ಹೂತಿಟ್ಟ ಮಹಿಳೆಯ ಜಾಡು ಪತ್ತೆ ಹಚ್ಚಲಾಯಿತು. ಆದರೆ ಅಷ್ಟರಲ್ಲಿ ಮಹಿಳೆ ಯಲಹಂಕದಲ್ಲಿ ವಾಸವಿದ್ದ ಮನೆಯನ್ನು ಖಾಲಿ ಮಾಡಿದ್ದರು. ಆ ಬಳಿಕ ಮೊಬೈಲ್ ನೆಟ್ ವರ್ಕ್ ಮೂಲಕ ಶೋಧ ನಡೆಸಿದಾಗ ಮಹಿಳೆ ಕೊಡಿಗೇಹಳ್ಳಿಯ ಬಳಿ ವಾಸಿಸುತ್ತಿರುವುದು ಪತ್ತೆಯಾಗಿತ್ತು.
ಪೊಲೀಸರು ಮಹಿಳೆಯನ್ನ ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಮತ್ತೊಂದು ವಿಚಿತ್ರ ಸತ್ಯ ಅನಾವರಣವಾಗಿದೆ. ಗುಂಡುಗಳನ್ನು ಹೂತಿಟ್ಟ ಆರೋಪಿ ಮಹಿಳೆ ಭಾರತೀಯ ವಾಯುಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ರ ಪತ್ನಿ. ನಿವೃತ್ತ ಗ್ರೂಪ್ ಕ್ಯಾಪ್ಟನ್ ಕೆಲವು ವರ್ಷಗಳ ಹಿಂದೆ ಮದ್ದು ಗುಂಡು ಸಮೇತ ರೈಫಲ್ ಖರೀದಿಸಿದ್ದರು. ಅವರು ಕಳೆದ ವರ್ಷ ಕಾನೂನಾತ್ಮಕವಾಗಿ ಗನ್ ಮಾರಾಟ ಮಾಡಿದ್ದರು. ಆದರೆ 15 ಗುಂಡುಗಳು ಮಾರಾಟ ಮಾಡದೆ ಮನೆಯಲ್ಲಿ ಉಳಿಸಿಕೊಂಡಿದ್ದರು.
ಮತ್ತೊಂದೆಡೆ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮಹಿಳೆಯ ಪುತ್ರನ ಸಾಂಸಾರಿಕ ಜೀವನ ಹದಗೆಟ್ಟಿತ್ತು. ಅಂದುಕೊಂಡ ಕೆಲಸಗಳು ಆಗುತ್ತಿಲ್ಲ ಎಂದು ಈ ಮಹಿಳೆ ನೊಂದುಕೊಂಡಿದ್ದರು. ಮನೆಯಲ್ಲಿ ಮದ್ದುಗುಂಡುಗಳು ಇರುವುದರಿಂದಲೇ ಮಗನ ಜೀವನ ಹೀಗಾಗಿದೆ. ಜೀವಂತ ಗುಂಡುಗಳು ಮನೆಯಿಂದ ಹೊರಗೆ ಸಾಗಿಸಿದರೆ ಮಗನಿಗೆ ಒಳ್ಳೆಯದಾಗಲಿದೆ ಎಂದು ಭಾವಿಸಿದ್ದರು. ಹಾಗಾಗಿ ಅವರು ಮನೆಯಲ್ಲಿದ್ದ 15 ಗುಂಡುಗಳ ಪೈಕಿ ಎರಡು ಗುಂಡುಗಳನ್ನು ಖಾಸಗಿ ಹೋಟೆಲ್ ನಲ್ಲಿ ಹೂತಿಟ್ಟಿದ್ದರು. ಪೊಲೀಸರಿಗೆ ಅವರು ಇಷ್ಟು ಮಾಹಿತಿಯನ್ನು ಮಾತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ಹೇಳಿಕೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ಧಾರೆ.