ಯಾದಗಿರಿ: ಪ್ರಿಯಕರನ ನೆರವಿನಿಂದ ದೇವರ ಪ್ರಸಾದವೆಂದು ನೀರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಟ್ಟು ತನ್ನ ಗಂಡನನ್ನೇ ಕೊಲ್ಲಲು ಪತ್ನಿ ಯತ್ನಿಸಿದ್ದಾಳೆ.
ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೂವಿನಹಳ್ಳಿ ಗ್ರಾಮದ ವಿಶ್ವನಾಥ ರೆಡ್ಡಿ ಅವರ ಪತ್ನಿ ಚಂದ್ರಕಲಾ ದೇವರ ಪ್ರಸಾದ ಸೇವನೆ ಮಾಡಿದರೆ ಒಳ್ಳೆದಾಗುತ್ತೆ ಎಂದು ನೀರಿನಲ್ಲಿ ನಿದ್ದೆ ಮಾತ್ರಗಳನ್ನು ಬೆರೆಸಿ ತನ್ನ ಪತಿಗೆ ಕುಡಿಸಿದ್ದಾಳೆ.
ಅರ್ಧ ಲೋಟ ನೀರು ಕುಡಿದ ವಿಶ್ವನಾಥ್ ರೆಡ್ಡಿ ನಿದ್ರೆಗೆ ಜಾರಿದ್ದಾರೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಚಂದ್ರಕಲಾ ತನ್ನ ಪ್ರಿಯಕರ ಬಸ್ಸಣಗೌಡ ಜೊತೆ ಸೇರಿಕೊಂಡು ವಿಶ್ವನಾಥ ರೆಡ್ಡಿಯನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ ಈ ವೇಳೆ ವಿಶ್ವನಾಥ್ ಗೆ ಎಚ್ಚರವಾಗಿದ್ದು ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಪ್ರೀತಿ ಮಾಡುವ ನೆಪದಲ್ಲಿ ಖಾಸಗಿ ಕ್ಷಣಗಳ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರಿಯಕರ…
ಬಳಿಕ ಚಂದ್ರಕಲಾ ಮತ್ತು ಬಸ್ಸಣಗೌಡನನ್ನು ವಿಚಾರಿಸಿದಾಗ ಇವರಿಬ್ಬರೂ ಕಳೆದ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಪ್ರಿಯಕರ ಬಸ್ಸಣಗೌಡ ಹಾಗೂ ಚಂದ್ರಕಲಾ ಸೇರಿಕೊಂಡು ವಿಶ್ವನಾಥ ರೆಡ್ಡಿಗೆ ಕೊಲೆಗೆ ಸ್ಕೆಚ್ ಹಾಕಿದ್ದರು ಎಂಬುದು ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ವಿಶ್ವನಾಥ ರೆಡ್ಡಿ ಉಕ್ಕಿನಾಳ ಗ್ರಾಮದ ಬಸವೇಶ್ವರ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಬಸ್ಸಣಗೌಡ ಮಗುವಿಗೆ ಔಷಧಿ ಕಳುಹಿಸುವಂತೆ ಚಂದ್ರಕಲಾ ತಿಳಿಸಿರುವುದಾಗಿ ನಿದ್ದೆ ಮಾತ್ರೆಗಳನ್ನು ವಿಶ್ವನಾಥ ರೆಡ್ಡಿಮೂಲಕ ಚಂದ್ರಕಲಾಗೆ ಕಳುಹಿಸಿದ್ದ. ಚಂದ್ರಕಲಾ ಇದೇ ನಿದ್ದೆ ಮಾತ್ರೆಗಳನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ದೇವರ ಪ್ರಸಾದವೆಂದು ತನ್ನ ಪತಿಗೆ ಕುಡಿಸಿದ್ದಳು. ಪತಿಯನ್ನು ಕೊಲೆ ಮಾಡುವ ಪ್ಲಾನ್ ಫೇಲಾದ ಬೆನ್ನಲ್ಲೇ ಚಂದ್ರಕಲಾ ಹಾಗೂ ಪ್ರಿಯಕರ ಬಸ್ಸಣಗೌಡ ಬಣ್ಣ ಬಯಲಾಗಿದೆ.
ಬಸ್ಸಣಗೌಡ ಹಾಗೂ ಚಂದ್ರಕಲಾ ಪೋನಿನಲ್ಲಿ ಇವರಿಬ್ಬರ ನಡುವಿನ ಮಾತುಕತೆ ರೆಕಾರ್ಡ್ ಆಗಿತ್ತು. ಈ ರೆಕಾರ್ಡಿಂಗ್ ನಿಂದ ಇವರಿಬ್ಬರ ಪ್ರೀತಿಯ ವಿಚಾರ ಕುಟುಂಬಸ್ಥರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ ರೆಡ್ಡಿ ಪತ್ನಿ ಚಂದ್ರಕಲಾ ಹಾಗೂ ಪ್ರಿಯಕರ ಬಸ್ಸಣಗೌಡ ವಿರುದ್ದ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ )307 ,326 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೆಂಬಾವಿ ಪೊಲೀಸರು ಚಂದ್ರಕಲಾ ಹಾಗೂ ಆಕೆಯ ಪ್ರಿಯಕರ ಬಸ್ಸಣಗೌಡನನ್ನ ಬಂಧಿಸಿ ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಸ್ಥಳ: ಯಾದಗಿರಿ
ವರದಿಗಾರ: ಶಿವಕುಮಾರ ವೈ ದೇಶಮಾನೆ