ವಿಜಯಪುರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡೂವರೆ ತಿಂಗಳಾಗುತ್ತಾ ಬಂದಿದ್ದರೂ ಅವರ ನೆನಪು ಜನಮಾಸನದಲ್ಲಿ ಅಚ್ಚಳಿಯದೇ ಉಳಿದಿದೆ. ಅಪಾರ ಪ್ರಮಾಣದ ಪುಟಾಣಿ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜ್ ಕುಮಾರ್ ಗೆ ವಿಜಯಪುರದ ಬಾಲಕನೊಬ್ಬ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಅಪ್ಪು ಫೋಟೋದೊಂದಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾನೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ 13 ವರ್ಷದ ಬಾಲಕ ಅಭಿಷೇಕ್ ಇದೇ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ್ದು, ತನ್ನೊಂದಿಗೆ ಪುನೀತ್ ಭಾವಚಿತ್ರವನ್ನೂ ಶಬರಿಮಲೆಗೆ ಕೊಂಡೋಯ್ದು ಅಪ್ಪು ಫೋಟೋದೊಂದಿಗೆ ದರ್ಶನ ಪಡೆದಿದ್ಧಾನೆ.
ಇದನ್ನೂ ಓದಿ: ವಿಜಯಪುರದ ಇಂಡಿಯಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದು ಬಾಲಕ ಸಾವು…
ಅಭಿಷೇಕ್ ತಂದೆ ಮಲ್ಲಿಕಾರ್ಜುನ ಗಂಗನಗೌಡ್ರು ಸತತ 25 ವರ್ಷಗಳಿಂದ ಮಾಲೆ ಧರಿಸಿ ಶಬರಿ ಮಲೆಗೆ ಹೋಗುತ್ತಿದ್ದಾರೆ. ಈ ವರ್ಷ ಅಭಿಷೇಕ್ ತನ್ನ ತಂದೊಯೊಂದಿಗೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದಾನೆ.
ಪುನೀತ್ ರಾಜಕುಮಾರ್ ಕೂಡ ಪ್ರತಿ ವರ್ಷ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದರು. ಸಣ್ಣ ವಯಸ್ಸಿನಿಂದಲೂ ಮಾಲೆ ಹಾಕಿ ಅಣ್ಣ ಶಿವರಾಜ್ ಕುಮಾರ್ ಜೊತೆ ಶಬರಿಮಲೆಗೆ ತೆರಳುತ್ತಿದ್ದರು. ರಾಜ್ ಕುಮಾರ್ ಜೊತೆಗೂ ಅಪ್ಪು ಶಬರಿ ಮಲೆ ಯಾತ್ರೆ ಮಾಡಿದ್ದನ್ನು ಟಿವಿಯಲ್ಲಿ ನೋಡಿರುವೆ. ಈ ಸಾರಿ ನನ್ನೊಂದಿಗೆ ಅಪ್ಪು ಸರ್ ಹದಿನೆಂಟು ಮೆಟ್ಟಿಲುಗಳನ್ನು ಏರಿ ಬರಲಿ, ಅವರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಸುವೆ ಎಂದು ಅಭಿಷೇಕ ತಿಳಿಸಿದ್ದಾನೆ.