ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಲು ಆಗಮಿಸಿದ್ದ ತಮಿಳು ನಟ ವಿಜಯ್ ಸೇತುಪತಿ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಲು ಯತ್ನಿಸಿದ್ದ. ಈ ಘಟನೆ ಬಳಿಕ ವಿಜಯ್ ಸೇತುಪತಿ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ತೆರಳಿ ಗೌರವ ಸೂಚಿಸಿದ್ದರು. ಈಗ ಅವರು ಏರ್ ಪೋರ್ಟ್ ನಲ್ಲಿ ನಡೆದ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
‘ಏರ್ ಪೋರ್ಟ್ ನಲ್ಲಿ ನಡೆದ ಘಟನೆ ಅಂತಹ ದೊಡ್ಡ ಘಟನೆ ಅಲ್ಲ. ಯಾರೋ ಒಬ್ಬರು ಮೊಬೈಲ್ ನಲ್ಲಿ ಶೂಟ್ ಮಾಡಿ ವೈರಲ್ ಮಾಡಿದ್ದರಿಂದ ಈ ಘಟನೆ ಇಷ್ಟು ದೊಡ್ಡದಾಯಿತು. ಅಂದು ಗಲಾಟೆ ಮಾಡಿದ ವ್ಯಕ್ತಿ ಕುಡಿದಿದ್ದ, ಪ್ರಜ್ಞೆ ಇಲ್ಲದೆ ಇದ್ದರೆ ಈ ರೀತಿ ವರ್ತಿಸುತ್ತಾರೆ. ಗಲಾಟೆ ಮಾಡಿದ ವ್ಯಕ್ತಿ ನನ್ನ ಫ್ಯಾನ್ ಅಲ್ಲ. ಆತ ನಮ್ಮೊಂದಿಗೆ ವಾಗ್ವಾದ ನಡೆಸುತ್ತಲೇ ಇದ್ದ. ವಿಮಾನದಿಂದ ಇಳಿದ ಮೇಲೂ ವಾಗ್ವಾದ ಮುಂದುವರೆಸಿದ್ದ. ಅಂದು ಗಲಾಟೆ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಮಡಿದ್ದಾರೆ. ಎಲ್ಲವೂ ಬಗೆಹರಿದಿದೆ. ಇದನ್ನು ದೊಡ್ಡದು ಮಾಡಬೇಕಿಲ್ಲ. ಈಗ ಎಲ್ಲರೂ ಮಾಸ್ಕ್ ಹಾಕಿಕೊಳ್ಳುವುದರಿಂದ ಯಾರು ಕುಡಿದಿದ್ದಾರೆ, ಇಲ್ಲ ಎಂಬುದು ಗೊತ್ತಾಗುವುದಿಲ್ಲ ಎಂದು ವಿಜಯ್ ಸೇತುಪತಿ ಅಂದಿನ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಏರ್ ಪೋರ್ಟ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನ… ಹಲ್ಲೆ ನಡೆದಿದ್ದು ಏಕೆ ಗೊತ್ತಾ?
ನಾನು ಎಲ್ಲಿಗೇ ಹೋಗಬೇಕೆಂದರೂ ನನ್ನ ಮ್ಯಾನೇಜರ್ ಆದ ನನ್ನ 30 ವರ್ಷಗಳ ಸ್ನೇಹಿತ ಮಾತ್ರ ನನ್ನ ಜೊತೆ ಇರುತ್ತಾನೆ. ನನ್ನ ಸುತ್ತಮುತ್ತ ಭದ್ರತೆಗೆ ಜನ ಇರಬೇಕು ಎಂದು ನಾನು ಬಯಸುವುದಿಲ್ಲ ಎಂದು ವಿಜಯ್ ಸೇತುಪತಿ ತಿಳಿಸಿದ್ದಾರೆ.
ವಿಜಯ್ ಸೇತುಪತಿ ವಿಮಾನ ನಿಲ್ದಾಣದ ಹೊರಗೆ ಬರುವಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಅವರ ಪಕ್ಕದಲ್ಲಿದ್ದ ಮ್ಯಾನೇಜರ್ ಗೆ ಏಕಾಏಕಿ ಒದ್ದಿದ್ದಾನೆ. ತಕ್ಷಣ ಸೇತುಪತಿ ಜೊತೆಯಲ್ಲಿದ್ದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಈ ವಿಡಿಯೋ ವೈರಲ್ ಆಗಿತ್ತು.