ಮಂಗಳೂರು: ಯಕ್ಷಗಾನ ಲೋಕದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಹಿರಿಯ ಕಲಾವಿದ ಕುಂಬ್ಳೆ ಸುಂದರ್ ರಾವ್ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರಾಗಿದ್ದ ಸುಂದರ್ ರಾವ್ ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1994 ರಿಂದ 1999ರ ವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಇವರು ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.
ಕುಂಬ್ಳೆ ಸುಂದರ್ ರಾವ್ ಅವರು ಅದ್ಭುತ ವಾಕ್ ಚಾತುರ್ಯದಿಂದ ಹಾಗೂ ಪ್ರಾಸಬದ್ಧ ಸಂಭಾಷಣೆಯಿಂದಲೇ ಹೆಸರುವಾಸಿಯಾಗಿದ್ದರು. ರಾವ್ 50ಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂಬ್ಳೆ ಸುಂದರ್ ರಾವ್ ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಸುಂದರ್ ರಾವ್ ನಿಧನಕ್ಕೆ ಯಕ್ಷಕಲಾರಂಗ ಸಂತಾಪ ವ್ಯಕ್ತಪಡಿಸಿದೆ.
ಇದನ್ನೂ ಓದಿ :ಇಂದೇ ಸುರತ್ಕಲ್ ಹೆದ್ದಾರಿ ಟೋಲ್ ಬಂದ್… ಫಲಕೊಟ್ಟ 35 ದಿನಗಳ ಅಹೋರಾತ್ರಿ ಧರಣಿ…