ಬೆಂಗಳೂರು: ಶ್ರಾವಣ ಬಂತೆಂದರೆ ಸಾಕು ಹಬ್ಬಗಳ ಸಾಲು ಆರಂಭವಾದಂತೆ. ಅದರಲ್ಲೂ ಶ್ರಾವಣದ ಎರಡನೇ ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರಿಗೆ ಅಚ್ಚುಮೆಚ್ಚಾಗಿರುವುದು. ಈ ಬಾರಿ ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಆಗಸ್ಟ್ 5ರಂದು ಆಚರಿಸಲಾಗುತ್ತಿದೆ. ಈ ಹಬ್ಬದ ವಿಶೇಷತೆ, ಪೂಜೆ ಸೇರಿದಂತೆ ಇನ್ನಿತರ ಮಾಹಿತಿ ತಿಳಿಯಬೇಕಾ ಹಾಗಿದ್ರೆ ಮಿಸ್ ಮಾಡದೇ ಈ ಸ್ಟೋರಿ ಓದಿ…
ವರಮಹಾಲಕ್ಷ್ಮಿ ಹೆಸರೇ ಸೂಚಿಸುವಂತೆ ವರ ನೀಡುವ ಲಕ್ಷ್ಮಿಯ ವ್ರತದ ಹಬ್ಬವಾಗಿದ್ದು, ಈ ದಿನ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿ, ಆಕೆಗೆ ಅಲಂಕಾರ ಮಾಡಿ, ವಿವಿಧ ಭಕ್ಷ್ಯಗಳನ್ನು ಪ್ರಸಾದವಾಗಿ ನೀಡಿ, ಮುತ್ತೈದೆಯರಿಗೆ ಅರಿಶಿಣ ಕುಂಕಮ ನೀಡುವುದರಿಂದ ಮನೆಯ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಹಿಂದೂ ಧರ್ಮದಲ್ಲಿ ಸಂಪತ್ತಿನ ಅಧಿದೇವತೆಯೆಂದೇ ಕರೆಸಿಕೊಳ್ಳುವ ಲಕ್ಷ್ಮೀ ದೇವಿಯನ್ನು ಆರಾಧಿಸಿ ವಿಶೇಷ ವರ ಕೊಡು ಎಂದು ಬೇಡಿಕೆಯಿಡುವ ಈ ಹಬ್ಬ “ವರಮಹಾಲಕ್ಷ್ಮಿ ವೃತ”ವೆಂದು ಕರೆಸಿಕೊಳ್ಳುತ್ತದೆ.
ಸಂಪತ್ತಿನ ದೇವತೆಯ ವ್ರತಾಚರಣೆ ಹೀಗಿರಲಿ…. ವರಮಹಾಲಕ್ಷ್ಮಿ ಆಚರಣೆ ಮಾಡುವುದಾದರೆ, ಬೆಳಗ್ಗೆಯೇ ಲಕ್ಷ್ಮಿ ಕೂರಿಸುವ ಸಂಕಲ್ಪ ಮಾಡಿ. ಮನೆಯಲ್ಲಿ ಲಕ್ಷ್ಮಿ ಕೂರಿಸುವ ಸಂಕಲ್ಪ ಮಾಡಿದರೆ, ಮುಂಜಾನೆಯೇ ಎದ್ದು ಸ್ನಾನ ಮಾಡಿ, ಕಲಶ ಸ್ಥಾಪನೆ ಮಾಡಬೇಕು. ಲಕ್ಷ್ಮಿ ಕೂರಿಸುವ ಸ್ಥಳ ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ. ನೀರು ತುಂಬಿದ ಕಲಶ ಸ್ಥಾಪನೆ ಮಾಡಿ. ಅದರೊಳಗೆ ಬೆಳ್ಳಿ ಅಥವಾ 1 ರೂ ನಾಣ್ಯ ಹಾಕಿ ಕಲಶದ ಮೇಲೆ ತೆಂಗಿನಕಾಯಿ ಇಡಿ. ಅದಕ್ಕೆ ಸೀರೆ ಉಡಿಸಿ ಅಲಂಕರಿಸಿ. ಹೂವುಗಳಿಂದ ಅಲಂಕರಿಸಿ. ಲಕ್ಷ್ಮಿ ದೇವಿ ಆಹ್ವಾನಿಸಿ. ದೇವರ ಮುಂದೆ ತುಪ್ಪದ ದೀಪ ಹಚ್ಚಿ, ಇದೇ ವೇಳೆ ಪೂಜೆಯಲ್ಲಿ ವಿಘ್ನ ಬಾರದಂತೆ ಗಣೇಶನ ಪೂಜಿಸಿ. ಬಳಿಕ ಹೂವು ಹಣ್ಣು, ಅಕ್ಷತೆ ಸಿಹಿ ತಿನಿಸುಗಳನ್ನು ದೇವಿ ಮುಂದೆ ಅರ್ಪಿಸಿ. ಬಳಿಕ ವರ ಮಹಾಲಕ್ಷ್ಮಿ ಸ್ತೋತ್ರ ಪಠಿಸಿ.
ಪೂಜೆಯ ಬಳಿಕ ಮನೆಗೆ ಸುಮಂಗಲಿಯರ ಕರೆದು ಅವರಿಗೆ ಅರಿಶಿಣ ಕುಂಕಮ, ರವಿಕೆ, ಹಣ್ಣು, ವಿಳ್ಯದೆಲೆ ಅಡಿಕೆ ನೀಡಿ. ಇದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಪೂಜೆಯ ಬಳಿಕ ದೇವಿಯ ಕಳಸವನ್ನು ಒಂದು, ಮೂರು ಹಾಗೂ ಐದು ದಿನ ಕಾಲ ಮನೆಯಲ್ಲಿಟ್ಟು ಬಳಿಕ ವಿಸರ್ಜನೆ ಮಾಡಬಹುದು.
ಇದನ್ನೂ ಓದಿ : ತೈವಾನ್ ಬಳಿ ಸಮರಾಭ್ಯಾಸ ಆರಂಭಿಸಿದ ಚೀನಾ… 11 ಖಂಡಾಂತರ ಕ್ಷಿಪಣಿ ಉಡಾಯಿಸಿದ ಚೀನಾ ಸೇನೆ…