ನಮ್ಮಲ್ಲಿ ಪುರಾತನ ಕಾಲದಿಂದಲೂ ದೇವಾಲಯಗಳಲ್ಲಿ ಪೂಜಾ ಕಾರ್ಯಗಳಿಗೆ ಆನೆಗಳನ್ನು ಬಳಕೆ ಮಾಡುವ ಪದ್ಧತಿ ಇದೆ. ಆದರೆ ಆನೆಗಳನ್ನು ದೇವಾಲಯದಲ್ಲಿ ಬಳಸುವುದು ಕ್ರೌರ್ಯ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಈ ಕುರಿತು ಚಾಟಿ ಬೀಸಿದೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಂಸ್ಥಾಪಕ ಟ್ರಸ್ಟಿ ರಾಧಮ್ಮ ಮತ್ತು ಪ್ರಧಾನ ಪೂಜಾರಿ ವಸಂತ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎ.ಎಸ್ ಓಕ ಅವರ ನೇತೃತ್ವದ ಪೀಠವು ಆನೆಗಳನ್ನು ಪೂಜಾಕಾರ್ಯಕ್ಕೆ ಬಳಸುವುದು ಕ್ರೌರ್ಯ ಎಂದು ಅಭಿಪ್ರಾಯಪಟ್ಟಿದೆ.
ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನವು ಮುಜರಾಯಿ ಇಲಾಖೆ ಸುಪರ್ದಿಗೆ ಸೇರುವ ಮುನ್ನ ದೇಗುಲದಲ್ಲಿ ಪೂಜೆ ನೆರವೇರಿಸಲು ಆನೆಯೊಂದನ್ನು ತಂದು ಪೋಷಿಸಲಾಗುತ್ತಿತ್ತು. ಆದರೆ ದೇಗುಲ ಮುಜರಾಯಿ ಇಲಾಖೆ ಸುಪರ್ದಿಗೆ ಸೇರ್ಪಡೆಯಾದ ಬಳಿಕ ಆನೆಯೂ ಸರ್ಕಾರದ ವಶದಲ್ಲಿದೆ. ಹಾಗಾಗಿ ಆನೆಯನ್ನು ದೇವಾಲಯದಲ್ಲಿ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಗುರುವಾರ ಅರ್ಜಿಯ ವಿಚಾರಣೆ ವೇಳೆ ಆನೆಗಳು ದೇವಸ್ಥಾನದಲ್ಲಿ ಇರಬಾರದು, ಕಾಡಿನಲ್ಲಿರಬೇಕು. ಆನೆಗಳಿಗೆ ಕಾಡಿನಲ್ಲಿರುವ ಆನೆಗಳೊಂದಿಗೆ ಜೀವಿಸಲು ಅವಕಾಶ ಕಲ್ಪಿಸಬೇಕು. ಆದರೆ ಅದನ್ನು ಪೂಜಾ ಕಾರ್ಯಗಳಿಗೆ ಬಳಸುವುದು ಎಷ್ಟು ಸರಿ. ಹಿಂದಿನ ಕಾಲದಲ್ಲಿ ಆನೆಗಳನ್ನು ದೇವಾಲಯದಲ್ಲಿ ಪೂಜಾ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದ ವೇಳೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಜಾರಿಯಲ್ಲಿ ಇರಲಿಲ್ಲ. ಈಗ ಈ ಕಾಯ್ದೆ ಜಾರಿಯಲ್ಲಿದೆ. ಹಿಂದೆ ಈ ಪದ್ಧತಿ ಜಾರಿಯಲ್ಲಿತ್ತು ಎಂದು ಮುಂದೆಯೂ ಇದನ್ನು ಮುಂದುವರೆಸಬೇಕು ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಆನೆಗೆ ಆರೋಗ್ಯ ಸಮಸ್ಯೆ ಇದ್ದು, ಚಿಕಿತ್ಸೆಗಾಗಿ ಮಾಲೂರಿನಲ್ಲಿರುವ ಅರಣ್ಯ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ಆನೆಯನ್ನು ಕಳುಹಿಸಲಾಗುತ್ತಿದೆ ಎಂದು ಸರ್ಕಾರಿ ವಕೀಲ ವಿಜಯ್ ಕುಮಾರ್ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ 2 ವಾರಗಳ ಕಾಲಾವಕಾಶವನ್ನು ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 13 ಕ್ಕೆ ಮುಂದೂಡಿದೆ.
ಇದನ್ನೂ ಓದಿ: 14 ಜನರಿಗೆ ಮರುಜೀವ ನೀಡಿದ ಇಬ್ಬರು… ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು