ಬೆಂಗಳೂರು: ಧಾರಾಕಾರ ಮಳೆಯಿಂದ ಬೆಂಗಳೂರಿನಲ್ಲಿ ಕಳೆದ ತಿಂಗಳು ಸಾಲು ಸಾಲು ಕಟ್ಟಡಗಳು ಧರೆಗುರುಳಿದ್ದರಿಂದ ಜನ ಬೆಚ್ಚಿಬಿದ್ದಿದ್ರು. ಕಟ್ಟಡಗಳ ಬಳಿಕ ಇದೀಗ ಅಂಡರ್ಪಾಸ್ಗಳ ಸರದಿ ಬಂದಿರೋ ಹಾಗೆ ಕಾಣ್ತಿದೆ. ಲಕ್ಷಾಂತರ ವಾಹನಗಳು ಸಂಚರಿಸೋ ಅಂಡರ್ಪಾಸ್ವೊಂದು ಜನರ ಬಲಿಗೆ ಕಾದು ಕುಳಿತಿದೆ. ಅದೆಲ್ಲಿ ಅಂತೀರಾ ಇಲ್ಲಿದೆ ಓದಿ…
ರಾಜ್ಯ ರಾಜಧಾನಿಯಲ್ಲಿ ಕಳೆದ 1 ವಾರದಿಂದ ಎಡಬಿಡದೆ ಮಳೆ ಸುರಿತಾನೇ ಇದ್ದು, ಇನ್ನೂ ಸಿಲಿಕಾನ್ ಸಿಟಿಯಲ್ಲಿ ಕಳೆದ ತಿಂಗಳು ಸಾಲು ಸಾಲು ಬಹುಮಹಡಿ ಕಟ್ಟಡಗಳು ಧರೆಗುರುಳಿ ಅವಾಂತರಗಳೇ ಸೃಷ್ಟಿಯಾಗಿದೆ. ಆದರೆ ಇದೀಗ ಸಿಟಿ ಜನರಿಗೆ ಅಂಡರ್ ಫಾಸ್ಗಳ ಆತಂಕ ಶುರುವಾಗಿದೆ, ರಾಜಧಾನಿಯ ಕೆಲ ಅಂಡರ್ ಫಾಸ್ ಗಳು ಜನರ ಪ್ರಾಣಾಹುತಿಗಾಗಿ ಕಾದು ಕುಳಿತಂತಿದೆ. ಶಿವಾಜಿ ನಗರದ ನೇತಾಜಿರೋಡ್ ಅಂಡರ್ ಪಾಸ್ ಸಂಪೂರ್ಣ ಶಿಥಿಲಾವಸ್ಥೆಗೆ ಬಂದು ನಿಂತಿದೆ. ಅದರ ಪಿಲ್ಲರ್ಗಳು ಬಿರುಕು ಬಿಟ್ಟಿವೆ. ಇದರ ಬೇಸ್ ಮೆಂಟ್ ನಲ್ಲಿ ಸಿಮೆಂಟ್ ಕಿತ್ತು ಹೋಗಿದ್ದು ಕಬ್ಬಿಣದ ರಾಡ್, ಜಲ್ಲಿ ಕಾಣುತ್ತಿದೆ, ಅಂಡರ್ ಪಾಸ್ ಸುತ್ತಲೂ ಪಾಚಿ ಕಟ್ಟಿದ್ದು ಮಳೆ ನೀರು ಸೋರುತ್ತಿದೆ. ಅಲ್ಲಲ್ಲಿ ಗಿಡಗಳು ಬೆಳೆದಿವೆ ಹಾಗೂ ಮೇಲ್ಬಾಗದಲ್ಲಿ ಹುಲ್ಲಿನ ರಾಶಿಯೇ ಬೆಳೆದು ನಿಂತಿದೆ.
ದಿನ ನಿತ್ಯ ಈ ಅಂಡರ್ ಪಾಸ್ ನಲ್ಲಿ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ ಈ ರೋಡ್ ನಂದಿ ದುರ್ಗ, ಕಂಟೋನ್ ಮೆಂಟ್ ರೈಲ್ವೇ ಸ್ಟೇಷನ್, ಟ್ಯಾನಿರೋಡ್, ಲಿಂಗರಾಜಪುರ, ಮೇಕ್ರಿಸರ್ಕಲ್, ಸದಾಶಿವನಗರ, ಗುಟ್ಟಳ್ಳಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಿಗೆ ಕನೆಕ್ಟ್ ಆಗುತ್ತದೆ. ಮಳೆ ಬಂದರೆ ಆ ಅಂಡರ್ ಪಾಸ್ನಲ್ಲಿ 5-6 ಅಡಿ ನೀರು ನಿಲ್ಲುತ್ತದೆ. ಇಲ್ಲಿ ಯಾವುದೇ ಲೈಟ್ ಕೂಡ ಇಲ್ಲ ಸುರಕ್ಷತೆ ದೃಷ್ಠಿಯಿಂದ ಸಿಸಿಟಿವಿ ಕ್ಯಾಮರಾ ಕೂಡ ಹಾಕಲಾಗಿಲ್ಲ. ಇನ್ನು ಈ ಅಂಡರ್ ಪಾಸ್ ಕೆಳಗೆ ರಾಶಿ ರಾಶಿ ಕಸ ಬಿದ್ದಿದ್ದು, ಈ ಅಂಡರ್ ಪಾಸ್ ಯಾವಾಗ ಕುಸಿಯುತ್ತೋ ಎಂಬ ಆತಂಕದಲ್ಲೇ ಜನರು ತಮ್ಮ ಪ್ರಾಣವನ್ನ ಕೈನಲ್ಲಿಡಿದು ಓಡಾಡುತ್ತಿದ್ದಾರೆ.
ಇನ್ನೂ ಈ ಅಂಡರ್ ಪಾಸ್ನ ಅವ್ಯವಸ್ಥೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನ ಕೇಳಿದರೆ ಈಗಾಗಲೇ ನಾವು ಸ್ಥಳ ಪರಿಶೀಲನೆ ಮಾಡಿದ್ದೇವೆ. RCC ಸ್ಟ್ರಕ್ಚರ್ ನಲ್ಲಿ ಅಂಡರ್ ಪಾಸ್ ಕಟ್ಟಲಾಗಿದೆ, ತಜ್ಞರ ತಂಡವನ್ನ ಸ್ಥಳಕ್ಕೆ ಕಳುಹಿಸಿ ಅದರ ಹೆಲ್ತ್ ಕಂಡೀಶನ್ ಪರಿಶೀಲಿಸಿ ಅದನ್ನ ಆದಷ್ಟು ಬೇಗ ರಿಪೇರಿ ಮಾಡಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನು 2 ದಿನ ಗುಡುಗು ಸಹಿತ ಭಾರೀ ಮಳೆ.. ಹವಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್ ಘೋಷಣೆ..