ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿ ಆರಂಭಿಸಿ ಇಂದಿಗೆ 37 ದಿನ ಕಳೆದಿದ್ದು, ಉಕ್ರೇನ್ ಸೇನೆ ಇಂದು ರಷ್ಯಾಗೆ ದೊಡ್ಡ ಶಾಕ್ ನೀಡಿದೆ. ಉಕ್ರೇನ್ ವಾಯುಪಡೆ ರಷ್ಯಾ ಗಡಿಯಲ್ಲಿರುವ ಬೆಲ್ಗೊರೊಡ್ ತೈಲ ಸಂಗ್ರಹಾಗಾರದ ಮೇಲೆ ಏರ್ ಸ್ಟ್ರೈಕ್ ಮಾಡಿದೆ.
ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸಿದ ದಿನದಿಂದಲೂ ಉಕ್ರೇನ್ ತೀವ್ರ ಪ್ರತಿರೋಧ ಒಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಸೇನೆಗೆ ಭಾರಿ ನಷ್ಟವುಂಟಾಗಿದೆ. ಉಕ್ರೇನ್ ನೆಲದಲ್ಲಿ ರಷ್ಯಾ ಸೇನೆಯನ್ನು ಗುರಿಯಾಗಿಸಿಕೊಂಡು ಉಕ್ರೇನ್ ಸೇನೆ ಹಲವು ದಾಳಿ ನಡೆಸಿದೆ. ಆದರೆ ಇದೇ ಮೊದಲ ಬಾರಿಗೆ ರಷ್ಯಾದ ನೆಲದಲ್ಲಿ ಉಕ್ರೇನ್ ಸೇನೆ ದಾಳಿ ನಡೆಸಿದೆ. ಬೆಲ್ಗೊರೊಡ್ ನ ತೈಲ ಸಂಗ್ರಹಾಗಾರದ ಮೇಲೆ ಉಕ್ರೇನ್ ಸೇನೆಯ ಹೆಲಿಕಾಪ್ಟರ್ ಗಳು ದಾಳಿ ಮಾಡಿವೆ ಎಂದು ಬೆಲ್ಗೊರೊಡ್ ನ ಗವರ್ನರ್ ಸ್ಪಷ್ಟಪಡಿಸಿದ್ಧಾರೆ.
Ukraine attacked oil depot inside Russia – governor
More: https://t.co/QNeWXTk3Yt pic.twitter.com/LzP6qBN38h
— RT (@RT_com) April 1, 2022
ಉಕ್ರೇನ್ ಸೇನೆಯ ದಾಳಿಯಿಂದಾಗಿ ತೈಲ ಸಂಗ್ರಹಾಗಾರಕ್ಕೆ ಬೆಂಕಿ ಬಿದ್ದಿದ್ದು, ಸುಮಾರು 170 ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಫಲ ಕೊಡ್ತಿದೆ ಅನ್ನೋ ಹೊತ್ತಿನಲ್ಲೇ ಈ ದಾಳಿ ನಡೆದಿರೋದು ಸಂಧಾನ ಮಾತುಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಲ್ಗೊರೊಡ್ ಉಕ್ರೇನ್ ಮತ್ತು ರಷ್ಯಾ ಗಡಿಯಿಂದ ಸುಮಾರು 40 ಕಿ.ಮೀ. ದೂರವಿದೆ. ಬೆಲ್ಗೊರೊಡ್ ನಿಂದ ಉಕ್ರೇನ್ ನ ಖಾರ್ಕೀವ್ ಗೆ 80 ಕಿ.ಮೀ ಅಂತರವಿದೆ.