ತುಮಕೂರು: ತುಮಕೂರು ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಶಿರಾ-ಹುಳಿಯಾರು ಬಳಿಯ ರಾಷ್ಟ್ರೀಯ ಹೆದ್ದಾರಿ 273ರ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಬುಕ್ಕಾಪಟ್ಟಣದಲ್ಲಿ ಟ್ರಾನ್ಸ್ಫಾರ್ಮರ್ ನೆಲಕ್ಕೆ ಬಿದ್ದು ಜನರು ಕತ್ತಲಲ್ಲಿ ಕಳೆಯುವಂತಾಯ್ತು. ಗುಬ್ಬಿ ತಾಲೂಕಿನಲ್ಲಿ ತೋಟಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದೆ. ಗುಬ್ಬಿ ಅರಣ್ಯ ಇಲಾಖೆ ವಸತಿಗೃಹ ಹಾಗೂ ಕಚೇರಿ ಜಲಾವೃತವಾಗಿದೆ. ತುಮಕೂರಿನ ಕೋತಿತೋಪಿನ ಆರ್.ಟಿ. ನಗರದ ಮನೆಗಳಿಗೆ ನೀರು ನುಗ್ಗಿದೆ. ಅಮಾನಿಕೆರೆಗೆ ಹೋಗುವ ನೀರು ಮನೆಗಳಿಗೆ ನುಗ್ಗಿದೆ. ತುಮಕೂರು ಸದಾಶಿವನಗರ ಮುಖ್ಯರಸ್ತೆಯಲ್ಲೇ ನದಿಯಂತೆ ನೀರು ಹರಿದು ಜನರು ಪರದಾಡಿದ್ರು. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಬಳಿ ಸುಮಾರು 5.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆಗೆ ತಾಗಿದಂತೆ ಜಯಮಂಗಲಿ ನದಿಯ ನೀರು ಹರಿಯುತ್ತಿದ್ದು, ಸೇತುವೆ ಮೇಲೆ ನಿಂತು ಜನರು ವೀಕ್ಷಣೆ ಮಾಡುತ್ತಿದ್ದಾರೆ.