ಇತ್ತೀಚಿನ ದಿನಗಳಲ್ಲಿ ಹಿಂದೆಂದೂ ಕಾಣದ ಹತ್ತು ಹಲವು ವೈರಸ್ ಗಳಿಂದ ಜನ ಜೀವನ ಹದಗೆಡುತ್ತಿದ್ದೆ. ನಮ್ಮ ಜೀವನ ಹದಗೆಡದೆ ಆರಾಮದಾಯಕ ಜೀವನ ನಡೆಸಲು ಮಿತ ಆಹಾರ ಹಾಗೂ ತಾಜಾ ಆಹಾರ ಸೇವಿಸಿ, ನಮ್ಮ ಆರೋಗ್ಯದ ಜೊತೆಗೆ ದೇಹದ ದೃಢತೆಯನ್ನು ಸಮವಾಗಿ ಕಾಪಾಡಿಕೊಳ್ಳಲು ಕೆಲವು ವಿಟಮಿನ್ ಗಳು ಅತ್ಯಾವಶ್ಯಕವಾಗಿರುತ್ತೆ.
ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳಿದ್ದರೆ, ಆಗ ಅದು ನಮ್ಮ ದೇಹಾರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೆಲವೊಂದು ವಿಟಮಿನ್ ಗಳು ಹಾಗೂ ಖನಿಜಾಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕೇಬೇಕು. ಇದರ ಕೊರತೆ ಕಂಡುಬಂದರೆ ಅದರಿಂದ ದೇಹದಲ್ಲಿ ಸಮಸ್ಯೆಗಳು ಆರಂಭವಾಗುವುದು.
ಹೀಗಾಗಿ ಪ್ರತಿನಿತ್ಯವೂ ನಾವು ಸೇವಿಸುವಂತಹ ಆಹಾರದಲ್ಲಿ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಇದೆಯಾ ಎಂದು ತಿಳಿಯುವುದು ಅಗತ್ಯ. ಮುಖ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳನ್ನು ದೂರವಿಡಲು ವಿಟಮಿನ್ ಬಿ6 ಸಮೃದ್ಧವಾಗಿರುವಂತಹ ಆಹಾರ ಸೇವನೆ ಮಾಡಬೇಕು.
ವಿಟಮಿನ್ ಬಿ6 ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು. ಇದು ನರ, ಚರ್ಮ, ಕೆಂಪು ರಕ್ತದ ಕಣಗಳು ಮತ್ತು ಅಂಗಾಂಗಗಳ ನಿರ್ವಹಣೆಗೆ ಅಗತ್ಯವಾಗಿ ಬೇಕು. ಇದು ದೇಹದಲ್ಲಿ ಉರಿಯೂತ ಕಡಿಮೆ ಮಾಡುವ ಜತೆಗೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಆಗುವುದು.
ಹೀಗಾಗಿ ನಿಮಗೆ ಜೀರ್ಣಕ್ರಿಯೆ ಸಮಸ್ಯೆಯಿದ್ದರೆ, ಆಗ ನೀವು ಆಹಾರದಲ್ಲಿ ವಿಟಮಿನ್ ಬಿ6 ಇರುವ ಆಹಾರ ಸೇವನೆ ಮಾಡಿ. ಇದು ಉರಿಯೂತ ತಗ್ಗಿಸುವುದು ಹಾಗೂ ಜೀರ್ಣಕ್ರಿಯೆಯನ್ನು ಸರಾಗವಾಗಿಸುವುದು. ದೇಹಾರೋಗ್ಯ ಕಾಪಾಡುವ ವಿಟಮಿನ್ ಬಿ6 ಇರುವ ಆಹಾರಗಳೆಂದರೆ ಹಾಲು, ಮೊಟ್ಟೆ, ಕಡಲೆಕಾಳು, ಸೊಪ್ಪು, ಬಾಳೆಹಣ್ಣು, ಪಾಲಕ್, ಹಸಿ ಬಟಾಣಿ ಕಾಳು, ಹಾಗೂ ಕುಚ್ಚಲಕ್ಕಿ. ಇದೆಲ್ಲ ಸೇವಿಸುವುದರಿಂದ ಒಬ್ಬ ಮನುಷ್ಯ ದೇಹದಲ್ಲಿ ವಿಟಮಿನ್ ಬಿ6 ಕೊರತೆಯಾಗದಂತೆ ತಡೆಯಬಹುದು.