ಸುಕ್ಕು ಗಟ್ಟಿದ ಮುಖ…ಸೊರಗಿ ಹೋದ ದೇಹ…ಕೈಯಲ್ಲಿ ಎರಡು ಕೋಲು..ಕ್ಷಣಾರ್ಧದಲ್ಲಿ ಚಮತ್ಕಾರ…ಆ ಇಳಿ ವಯಸ್ಸಿನ ಬಳಿಗೆ ಬಂದು ಕೈಲಾದ ಸಹಾಯ ಮಾಡ್ತಿರೋ ಜನರು…ಈ ದೃಶ್ಯವೇ ಸಾಕು ಈ ಇಳಿ ಜೀವದ ನೋವಿನ ಕಥೆ ಹೇಳಲು. ಎಲ್ಲಾ ಕೊರೋನಾ..ಕೊರೋನಾ..ಅಂತಾರೆ ಅದು ನಮಗೇನು ಮಾಡುತ್ತೆ ಅಂತಾ ದಿಟ್ಟವಾಗಿ ನುಡಿಯೋ ಈ ಅಜ್ಜಿಯ ಹೆಸರು ಶಾಂತಾ ಬಾಲು ಪವಾರ್. ಈಕೆಯ ಊರು ಮಹಾರಾಷ್ಟ್ರದ ಪುಣೆಯ ಹದಾಸ್ಪುರ್ನ ಗೋಸ್ವಿ ಬಸ್ತಿ. ಎರಡೂ ಕೈನಿಂದ ಶರವೇಗದಲ್ಲಿ ಕೋಲು ತಿರುಗಿಸೋ ಅಜ್ಜಿ ವಯಸ್ಸು 85 ವರ್ಷ.
‘ಅಮ್ಮಾ…ನಿನಗ್ಯಾರು ಸಮ’ ಅನ್ನೋ ಈ ಸಾಲು ಅಕ್ಷರಷಃ ಸತ್ಯ. ತನ್ನ ಕುಟುಂಬದ 20 ಮಂದಿಯನ್ನು ಸಲಹೋಕೆ ಅಜ್ಜಿ ಬೀದಿ ಬೀದಿಯಲ್ಲಿ ನಿಂತು ಸ್ಟಿಕ್ ಮ್ಯಾಜಿಕ್ ಮಾಡ್ತಿದೆ. ಗೋಸ್ವಿ ಬಸ್ತಿಯ ಶಾಂತಾ ಪವಾರ್ ಈಗ ಇಡೀ ಕುಟುಂಬದ ತುತ್ತು ಅನ್ನಕ್ಕೆ ಆಧಾರವಂತೆ. ಲಾಕ್ಡೌನ್ ಎಫೆಕ್ಟ್ನಿಂದ ಮಗನಿಗೆ ಇದ್ದು ಕೆಲಸ ಹೋಗಿದೆ. ದುಡಿಯೋ ಮೂರ್ನಾಲ್ಕು ಮಂದಿ ಕೈ ಖಾಲಿಯಾಗಿದೆ. ಹೀಗಾಗಿ ಈ ಅಜ್ಜಿಯೇ ಬೀದಿಬೀದಿಯಲ್ಲಿ ನಿಂತು ಕೋಲಿನ ಜಾದೂ ಮಾಡಿ ಅಷ್ಟಿಷ್ಟು ಹಣ ತಂದ್ರೆ ಇವರ ಮನೆಯ ಒಲೆ ಉರಿಯುತ್ತೆ.
ಹೀಗೆ ಮೊನ್ನೆ ಶಾಂತಾ ಪವಾರ್ ಕಸ್ಬಾ ಪೇಟ್ ಪ್ರದೇಶದಲ್ಲಿ ಕೋಲು ಜಾದೂ ಮಾಡೋ ದೃಶ್ಯವನ್ನು ಸೆರೆ ಹಿಡಿದು ನಟಿ ಐಶ್ವರ್ಯ ಕಾಳೆ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡಿದ್ರು. ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ನೋಡಿದ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋನು ಸೂದ್, ಪುಣೆ ಪೊಲೀಸ್ ಕಮಿಷನರ್ ಹೀಗೆ ಸಾಲು ಸಾಲು ಮಂದಿ ನೆರವಿಗೆ ಬಂದಿದ್ದಾರೆ. ಅಜ್ಜಿಗೊಂದು ಟ್ರೈನಿಂಗ್ ಕ್ಯಾಂಪ್ ಕಟ್ಟಿಕೊಡೋಣ ಎಂದಿದ್ದಾರೆ. ಡೆಡ್ಲಿ ವೈರಸ್ಗೆ ಬೆದರಿ ಹಿರಿ ಜೀವಗಳು ಮನೆ ಬಿಟ್ಟು ಬರ್ತಿಲ್ಲ. ಇಂಥಾ ಹೊತ್ತಲ್ಲಿ ತನ್ನ ಕುಟುಂಬದ ಹೊತ್ತಿನ ತುತ್ತಿಗಾಗಿ ಈ ಹಿರಿಜೀವ ಬೀದಿಗೆ ಬಂದಿರೋದು ಮಾತ್ರ ಮಾತೃ ಮಮತೆಗೆ ಯಾರು ಸಾಟಿ ಅನ್ನೋ ಮಾತು ನಿಜ ಮಾಡಿದೆ.