ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ, ಹಿಂದೂಗಳು ಮತ್ತು ಸಿಖ್ಖರು ದೇಶಕ್ಕೆ ಮರಳಿ ಬನ್ನಿ ಎಂದು ತಾಲಿಬಾನ್ ಸರ್ಕಾರ ಮನವಿ ಮಾಡಿಕೊಂಡಿದೆ.
ಅಮೆರಿಕ ಸೇನೆ ಅಫ್ಘಾನಿಸ್ತಾನ ತೊರೆದ ಬಳಿಕ ತಾಲಿಬಾನಿಗಳು ಆಫ್ಘನ್ ಅನ್ನು ಆಕ್ರಮಿಸಿಕೊಂಡಿತ್ತು. ಅಫ್ಘಾನಿಸ್ತಾನ ಮತ್ತೆ ತಾಲಿಬಾನಿಗಳ ವಶವಾದ ಬಳಿಕ ಲಕ್ಷಾಂತರ ಆಫ್ಘನ್ನರು ದೇಶ ತೊರೆದಿದ್ದರು. ಇದೇ ಸಮಯದಲ್ಲಿ ಅಫ್ಘಾನಿಸ್ತಾನದ ಬಹುತೇಕ ಹಿಂದೂಗಳೂ ಮತ್ತು ಸಿಖ್ಖರು ದೇಶ ತೊರೆದಿದ್ದರು.
ಈಗ ದೇಶ ತೊರೆದಿರುವ ಹಿಂದೂಗಳು ಮತ್ತು ಸಿಖ್ಖರಿಗೆ ಮರಳಿ ವಾಪಸ್ ಬರುವಂತೆ ತಾಲಿಬಾನ್ ಸರ್ಕಾರ ಮನವಿ ಮಾಡಿದೆ. ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಡಾ ಮುಲ್ಲಾ ಅಬ್ದುಲ್ ವಾಸಿ ಅವರು ಜುಲೈ 24 ರಂದು ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಕೌನ್ಸಿಲ್‌ನ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಾಗಾಗಿ ದೇಶ ತೊರೆದಿರುವ ಅಲ್ಪಸಂಖ್ಯಾತ ಸಮುದಾಯದವರು ವಾಪಸ್ ಬರಲಿ ಎಂದು ಮನವಿ ಮಾಡಿದ್ಧಾರೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಅಸೆಂಬ್ಲಿ ಎಲೆಕ್ಷನ್ಗೆ ನಿಲ್ಲಲ್ಲ… ಮದ್ದೂರಿನಲ್ಲಿ ಹೆಚ್.ಡಿ .ಕುಮಾರಸ್ವಾಮಿ ಘೋಷಣೆ…
ಜೂನ್ 18 ರಂದು, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ISKP) ಕಾಬೂಲ್‌ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ನಡೆಸಿತ್ತು. ಈ ಮಾರಣಾಂತಿಕ ದಾಳಿಯ ವೇಳೆ ಓರ್ವ ಸಿಖ್ ವ್ಯಕ್ತಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು. ದಾಳಿಕೋರರು ಗುರುದ್ವಾರದ ಆವರಣವನ್ನು ಪ್ರವೇಶಿಸಿದಾಗ ಸುಮಾರು 25 ರಿಂದ 30 ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ದಾಳಿ ವೇಳೆ ಸುಮಾರು 10-15 ಜನರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಆದರೆ ಗುರುದ್ವಾರದ ಕಾವಲುಗಾರ ಅಹ್ಮದ್ ಎಂಬುವವರು ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದರು. ತಾಲಿಬಾನ್ ಸರ್ಕಾರ ಉಗ್ರರ ದಾಳಿಯಿಂದ ಹಾನಿಗೊಳಗಾಗಿರುವ ಗುರುದ್ವಾರವನ್ನು ನವೀಕರಿಸಲು ನಿರ್ಧರಿಸಿತ್ತು.