ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ ಅಫ್ಘಾನಿಗಳ ಮೇಲೆ ತಾಲಿಬಾನಿ ಉಗ್ರರ ಕ್ರೌರ್ಯ ಮುಂದುವರೆದಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಜೂನಿಯರ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯ ಶಿರಚ್ಛೇದ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಅಫ್ಘಾನಿಸ್ತಾನ ಜೂನಿಯರ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಕೋಚ್ ಸಂದರ್ಶನವೊಂದರಲ್ಲಿ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಾಲಿಬಾನಿ ಉಗ್ರರು ವಾಲಿಬಾಲ್ ತಂಡದ ಆಟಗಾರ್ತಿ ಮಹಜಬಿನ್ ಹಕಿಮಿ ಎಂಬಾಕೆಯನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಶಿರಚ್ಛೇದ ಮಾಡಿದ್ದಾರೆ. ಉಗ್ರರು ಆಟಗಾರ್ತಿಯ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದರಿಂದ ಈ ವಿಷಯ ಬಹಿರಂಗವಾಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಯನ್ ಖಾನ್ ಗೆ ಜಾಮೀನು ನಿರಾಕರಿಸಿದ ಕೋರ್ಟ್… ಶಾರುಖ್ ಪುತ್ರನಿಗೆ ಇನ್ನಷ್ಟು ದಿನ ಜೈಲೇ ಗತಿ…
ತಾಲಿಬಾನಿಗಳು ಅಧಿಕಾರಕ್ಕೆ ಬರುವ ಮುನ್ನ ಮಹಜಬಿನ್ ಅವರು ಕಾಬುಲ್ ಮುನಿಸಿಪಾಲಿಟಿ ವಾಲಿಬಾಲ್ ಕ್ಲಬ್ ಪರ ಆಡುತ್ತಿದ್ದು, ಆಕೆ ಕ್ಲಬ್ ನ ಸ್ಟಾರ್ ಆಟಗಾರ್ತಿಯಾಗಿದ್ದರು. ಆದರೆ ಕೆಲವು ದಿನಗಳ ಹಿಂದೆ ಆಕೆಯ ರಕ್ತಸಿಕ್ತ ರುಂಡದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದಾದ ಬಳಿಕ ತಂಡದ ಕೋಚ್ ಶಿರಚ್ಛೇದದ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ.
ತಾಲಿಬಾನಿಗಳು ಅಧಿಕಾರಕ್ಕೆ ಬರುತ್ತಿದ್ದಂತೆ ವಾಲಿಬಾಲ್ ತಂಡದ ಇಬ್ಬರು ಆಟಗಾರ್ತಿಯರು ದೇಶ ತೊರೆಯಲು ಯಶಸ್ವಿಯಾಗಿದ್ದರು. ಉಳಿದವರು ಅಫ್ಘಾನಿಸ್ತಾನದಲ್ಲೇ ಸಿಲುಕಿದ್ದರು. ತಾಲಿಬಾನಿಗಳು ಮಹಿಳಾ ಅಥ್ಲಿಟ್ ಗಳನ್ನು ಹುಡುಕುತ್ತಿದ್ದಾರೆ. ಸಾಕಷ್ಟು ಆಟಗಾರ್ತಿಯಲು ತಾಲಿಬಾನಿಗಳ ಭಯದಿಂದ ತಲೆಮರೆಸಿಕೊಂಡಿದ್ದಾರೆ ಎಂದು ಕೋಚ್ ತಿಳಿಸಿದ್ದಾರೆ.
ಕಳೆದ ವಾರ ಫೀಫಾ ಮತ್ತು ಕತಾರ್ ಸರ್ಕಾರ ಅಫ್ಘಾನಿಸ್ತಾನದ 100 ಮಹಿಳಾ ಫುಟ್ ಬಾಲ್ ಆಟಗಾರ್ತಿಯರು ಮತ್ತು ಅವರ ಕುಟುಂಬಸ್ಥರನ್ನು ಅಫ್ಘನ್ ನಿಂದ ರಕ್ಷಿಸಿದ್ದವು. ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ ಕ್ರೀಡೆ, ರಾಜಕೀಯ ಮತ್ತು ಇತರೆ ಸಾರ್ವಜನಿಕ ಚಟುವಟಿಕಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ನಿಷೇಧಿಸಲಾಗಿದೆ.