ನವದೆಹಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಂಬಂಧ ಒಂದು ವಾರದೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಿ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮೀಸಲಾತಿ ಪಟ್ಟಿ ಪ್ರಕಟಿಸಿದ ಬಳಿಕ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದೆ.
ಬಿಬಿಎಂಪಿ ಚುನಾವಣೆ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಂ ಕಾನ್ವಿಲ್ಕರ್ ನೇತೃತ್ವದ ಪೀಠ ವಾರ್ಡ್‌ಗಳ ಪುನರ್ ವಿಂಗಡನೆಯಾದರೂ ಮೀಸಲಾತಿ ಹೊರಡಿಸಿಲ್ಲ. ಒಂದು ವಾರದೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಭಕ್ತ ವತ್ಸಲ ವರದಿ ಸಲ್ಲಿಕೆ ವಿಳಂಬವಾಯಿತು. ಈ ಹಿನ್ನಲೆಯಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ಬಳಿಕ ಒಂದು ವಾರ ಸಮಯ ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಸುದೀಪ್ ನಿಜವಾದ ಅಭಿನಯ ಈ ಸಿನಿಮಾದಲ್ಲಿ ಹೊರ ಬಂದಿದೆ..! ವಿಕ್ರಾಂತ್ ರೋಣ ಬಗ್ಗೆ ಪ್ರಿಯಾ ಸುದೀಪ್ ಮೆಚ್ಚುಗೆ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ (8 ವಾರ) ಆರಂಭಿಸಬೇಕು ಎಂದು ಕರ್ನಾಟಕ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಮೇ 20ರಂದು ಸೂಚನೆ ನೀಡಿತ್ತು. ಈ ಸಂಬಂಧ ವಾರ್ಡ್ ಪುನರ್ವಿಂಗಡನೆ ಮತ್ತು ಮೀಸಲಾತಿಯನ್ನೂ ಕಾಲಮಿತಿಯೊಳಗೆ ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು. ಆದರೆ ಮೀಸಲಾಟಿ ಪಟ್ಟಿ ಬಿಡುಗಡೆ ಮಾಡಿರಲಿಲ್ಲ.