ಬೆಂಗಳೂರು : ಪ್ರತಿಯೊಬ್ಬರೂ ಯಾವಾಗಲೂ ಆರೋಗ್ಯವಾಗಿರಬೇಕೆಂದು ಬಯಸುತ್ತಾರೆ. ಆದ್ರೆ ಮನುಷ್ಯನ ಬ್ಯುಸಿ ಲೈಫ್ನಲ್ಲಿ ಆಹಾರಪದ್ಧತಿ ಕೆಲವೊಮ್ಮೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೊರಗಿನಿಂದ ಕಾಣಿಸಿಕೊಳ್ಳುವ ಕಾಯಿಲೆ ಒಂದು ರೀತಿಯಾದರೆ, ದೇಹದ ಆಂತರಿಕ ಸಮಸ್ಯೆಗಳು ಇನ್ನು ಕೆಲವು. ಅದರಲ್ಲೊಂದು ಚರ್ಮದ ಅಲರ್ಜಿ. ದೇಹಕ್ಕಾಗದ ತಪ್ಪಾದ ಆಹಾರವನ್ನು ಸೇವಿಸಿದಾಗ ಚರ್ಮವೂ ಪ್ರತಿಕ್ರಿಯಿಸುತ್ತದೆ. ತುರಿಕೆ, ದದ್ದು, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಚರ್ಮದ ಅಲರ್ಜಿಯಿರುವವರು ನಿರ್ದಿಷ್ಟವಾದ ಕೆಲವು ಆಹಾರಗಳನ್ನು ಸೇವಿಸುವುದು ಉತ್ತಮ, ಕೆಲವು ಆಹಾರಗಳನ್ನು ಸೇವಿಸದೇ ಇರುವುದು ಒಳಿತು ಎಂದು ವೈದ್ಯರೇ ಹೇಳುತ್ತಾರೆ. ಹಾಗಾದರೆ ಅಲರ್ಜಿಯ ಸಮಸ್ಯೆಗೆ ಚಿಕಿತ್ಸೆ ನೀಡಲು ಯಾವ ಆಹಾರಗಳು ಬೆಸ್ಟ್ ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಮಿಸ್ ಮಾಡದೇ ಈ ಸ್ಟೋರಿ ಓದಿ..
ಗ್ರೀನ್ ಟೀ : ಹಲವಾರು ಆರೋಗ್ಯ ಪ್ರಯೋಜನಗಳನ್ನು ಗ್ರೀನ್ ಟೀ ಹೊಂದಿದೆ. ಇದು ನಿಮ್ಮ ಜೀರ್ಣಶಕ್ತಿಗೆ ಮತ್ತು ತೂಕ ಇಳಿಕೆಗೆ ಮಾತ್ರ ಪರಿಣಾಮಕಾರಿಯಾಗಿಲ್ಲ ಬದಲಾಗಿ ಅಲರ್ಜಿಯಂತಹ ಸಮಸ್ಯೆಗಳಿಗೂ ಪ್ರಯೋಜನಕಾರಿಯಾಗಿದೆ. ಈ ಹಸಿರು ಚಹಾದಲ್ಲಿ ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಅಲರ್ಜಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ. ಶುಂಠಿ: ಶುಂಠಿಯನ್ನುಸಾವಿರಾರು ವರ್ಷಗಳಿಂದ ವಾಕರಿಕೆ, ಕೀಲು ನೋವಿನಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತಿದೆ. ಶುಂಠಿಯನ್ನು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಅಲರ್ಜಿಯಂತಹ ಸಮಸ್ಯೆಯಿಂದ ಪಾರಾಗಬಹುದು. ವಿಶೇಷವಾಗಿ ಶುಂಠಿಯು ಜಿಂಜೆರಾಲ್ ಅನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ಅಲರ್ಜಿಯ ಲಕ್ಷಣಗಳ ವಿರುದ್ಧ ಹೋರಾಡಲು ಪ್ರಬಲವಾದ ಅಂಶವಾಗಿದೆ.ಇದರಿಂದಾಗಿ ಶುಂಠಿಯು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಅಲರ್ಜಿಯಂತಹ ಪ್ರಕ್ರಿಯೆಯಿಂದ ಪಾರುಮಾಡುತ್ತದೆ.
ಸ್ಟ್ರಾಬೆರಿ : ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಹಿಸ್ಟಮೈನ್‌ಗಳ ವಿರುದ್ಧ ಹೋರಾಡುವುದರಿಂದ ಕಣ್ಣುಗಳು ಮತ್ತು ಗಂಟಲಿನ ತುರಿಕೆಯ ಲಕ್ಷಣಗಳನ್ನು ಉಂಟು ಮಾಡುತ್ತದೆ. ಆದರೆ ಸ್ಟ್ರಾಬೆರಿಗಳಂತಹ ಹಣ್ಣುಗಳು ಈ ಸಮಸ್ಯೆಯಿಂದ ಮುಕ್ತಿ ದೊರಕಿಸಿಕೊಡುತ್ತದೆ. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ತುಂಬಿದ್ದು, ಹಿಸ್ಟಮೈನ್‌ಗಳನ್ನು ಬಿಡುಗಡೆ ಮಾಡುವುದರಿಂದ ಉರಿಯೂತದ ಕೋಶಗಳನ್ನು ನಿರ್ಬಂಧಿಸುತ್ತದೆ.
ಅರಿಶಿಣ : ಅರಿಶಿಣವನ್ನುಚಿನ್ನದ ದೇವತೆ ಎಂದೇ ಕರೆಯಲಾಗಿದ್ದು, ಪ್ರಾಚೀನ ಕಾಲದಿಂದಲೂ ಅದ್ಭುತವಾದ ಔಷಧಿಯಾಗಿ ಬಳಸಲಾಗುತ್ತಿದೆ. ಭಕ್ಷ್ಯಕ್ಕೆ ರುಚಿ ಮತ್ತು ಉತ್ತಮವಾದ ಬಣ್ಣವನ್ನು ನೀಡುವ ಈ ಅರಿಶಿಣದಲ್ಲಿ ಕುರ್ಕ್ಯಮಿನ್ ಹಿಸ್ಟಮೈನ್‌ಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ. ಅರಿಶಿಣವು ಅಲರ್ಜಿಯ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಇದರಲ್ಲಿರುವ ಕುರ್ಕ್ಯುಮಿನ್ ಮೂಗಿನ ದಟ್ಟಣೆಯನ್ನು ನಿವಾರಿಸುತ್ತದೆ ಎಂದು ತಿಳಿದು ಬಂದಿದೆ.
ಅನಾನಸ್ : ಅನಾನಸ್ ರಸಭರಿತವಾದ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣು ಹಲವಾರು ಪೋಷಕಾಂಶಗಳಿಂದ ತುಂಬಿದ್ದು, ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಅನಾನಸ್‌ನಲ್ಲಿ ಕೂಡ ವಿಟಮಿನ್ ಸಿ ಸಮೃದ್ಧವಾಗಿದೆ. ಆದಾಗ್ಯೂ, ಅನಾನಸ್‌ನ ಪ್ರಬಲ ಅಂಶವೆಂದರೆ ಅಲರ್ಜಿಯ ರಕ್ಷಣೆಗೆ ಸಹಾಯ ಮಾಡುವ ಬ್ರೋಮೆಲಿನ್ ಕಿಣ್ವ. ಇದು ಉರಿಯೂತದ ವಿರುದ್ಧ ಹೋರಾಡಲು ಉತ್ತೇಜಿಸುವ ಮೂಲಕ ಅಲರ್ಜಿಗೆ ಚಿಕಿತ್ಸೆ ನೀಡುತ್ತೆ.