ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗಿ ಅವರು ಕಾಬೂಲ್ ನಗರವನ್ನು ವಶಕ್ಕೆ ಪಡೆಯುತ್ತಿದ್ದಂತೆ ಕಾಬೂಲ್ ನಿಂದ ವಿದೇಶಿ ಪ್ರಜೆಗಳು ಮತ್ತು ಆಫ್ಘನ್ ಪ್ರಜೆಗಳು ದೇಶ ತೊರೆಯಲು ಸರ್ವ ಪ್ರಯತ್ನವನ್ನೂ ನಡೆಸಿದ್ದರು. ಆದರೆ ಅಲ್ಲಿನ ಯುದ್ಧದ ವಾತಾವರಣದಿಂದಾಗಿ ತಮ್ಮ ಪ್ರಜೆಗಳನ್ನು ಅಲ್ಲಿಂದ ರಕ್ಷಿಸುವುದು ಹಲವು ದೇಶಗಳಿಗೆ ಸವಾಲಿನ ಕೆಲಸವಾಗಿತ್ತು. ಭಾರತ ಸರ್ಕಾರ ಸಹ ಕಾಬೂಲ್ ನಲ್ಲಿರುವ ರಾಯಭಾರ ಕಚೇರಿಯಲ್ಲಿ ಸಿಲುಕಿದ್ದವರನ್ನು ಮತ್ತು ಇತರೆ ಭಾರತೀಯರನ್ನು ರಕ್ಷಿಸಲು ಸರ್ವ ಪ್ರಯತ್ನ ನಡೆಸಿತ್ತು. ಇದರ ಭಾಗವಾಗಿ ನಿನ್ನೆ ಸುಮಾರು 150 ರಾಜತಾಂತ್ರಿಕ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ಭಾರತಕ್ಕೆ ಕರೆತರಲಾಗಿತ್ತು. ಇವರನ್ನು ರಕ್ಷಿಸುವ ಕಾರ್ಯಾಚರಣೆ ಯಾವುದೇ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ ಎಂದು ತಿಳಿದು ಬಂದಿದೆ.
ತಾಲಿಬಾನಿಗಳು ಕಾಬೂಲ್ ನಗರವನ್ನು ಸಂಪೂರ್ಣವಾಗಿ ವಶಕ್ಕೆ ಪಡೆಯುತ್ತಿದ್ದಂತೆ ಸಾವಿರಾರು ಆಫ್ಘಾನಿಗರು ಕಾಬೂಲ್ ಏರ್ಪೋರ್ಟ್ ಗೆ ಧಾವಿಸಿ ಸಿಕ್ಕ ವಿಮಾನದಲ್ಲಿ ದೇಶ ತೊರೆಯಲು ಪ್ರಯತ್ನಿಸುತ್ತಿದ್ದರು. ಜೊತೆಗೆ ಸಾವಿರಾರು ಜನರು ಏರ್ ಪೋರ್ಟ್ ಕಡೆಗೆ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಗೆ ತೆರಳುವ ಎಲ್ಲಾ ಮಾರ್ಗಗಳಲ್ಲೂ ಜನವೋ ಜನ… ಇದೇ ವೇಳೆ ಸೋಮವಾರ ಮಧ್ಯರಾತ್ರಿ ರಾಯಭಾರ ಕಚೇರಿಯಲ್ಲಿದ್ದ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆ ಆರಂಭವಾಗಿತ್ತು.
Movement of the Indian Ambassador and the Embassy staff from Kabul to India was a difficult and complicated exercise. Thank all those whose cooperation and facilitation made it possible.
— Dr. S. Jaishankar (@DrSJaishankar) August 17, 2021
ಆಶ್ಚರ್ಯವೆಂದರೆ ಈ ಕಾರ್ಯಾಚರಣೆಯಲ್ಲಿ ತಾಲಿಬಾನಿಗಳು ನೆರವು ನೀಡಿದ್ದರು. ರಾಯಭಾರ ಕಚೇರಿಯಲ್ಲಿದ್ದವರೆಲ್ಲರೂ ಸುಮಾರು ಒಂದು ಡಜನ್ ವಾಹನಗಳಲ್ಲಿ ಹತ್ತಿ ಕುಳಿತಿದ್ದರು. ತಾಲಿಬಾನಿಗಳಿದ್ದ ವಾಹನಗಳು ಈ ವಾಹನಗಳಿಗೆ ರಕ್ಷಣೆ ಒದಗಿಸುತ್ತಾ ಏರ್ಪೋರ್ಟ್ ವರೆಗೂ ಕರೆತಂದಿದ್ದವು. ತಾಲಿಬಾನಿಗಳು ಕಾಬೂಲ್ ಸಮೀಪಕ್ಕೆ ಬರುತ್ತಿದ್ದಂತೆ ರಾಯಭಾರ ಕಚೇರಿಯಲ್ಲಿದ್ದ 200 ಜನರ ಪೈಕಿ ಕಾಲು ಭಾಗದಷ್ಟು ಜನರನ್ನು ರಕ್ಷಿಸಿ ಭಾರತಕ್ಕೆ ಕರೆತರಲಾಗಿತ್ತು. ಇನ್ನೇನು ಎರಡನೇ ಬ್ಯಾಚ್ ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ತಾಲಿಬಾನಿಗಳು ನಮ್ಮನ್ನು ತಡೆದಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳು ತಾಲಿಬಾನಿಗಳನ್ನು ಸಂಪರ್ಕಿಸಿ ಏರ್ಪೋರ್ಟ್ ವರೆಗೆ ತೆರಳಲು ಭಾರತೀಯರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡರು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ತಾಲಿಬಾನಿಗಳು ನಮಗೆ ರಕ್ಷಣೆ ನೀಡಲು ಒಪ್ಪಿಗೆ ಸೂಚಿಸಿದರು. ಅದರಂತೆ ತಾಲಿಬಾನಿಗಳ ರಕ್ಷಣೆಯಲ್ಲಿ ನಾವು ಏರ್ ಪೋರ್ಟ್ ತಲುಪಿದೆವು ಎಂದು ಕಾಬೂಲ್ ನಿಂದ ಮರಳಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯಭಾರ ಕಚೇರಿಯಿಂದ ಏರ್ಪೋರ್ಟ್ ಗೆ ಕೇವಲ 5 ಕಿ.ಮೀ. ಅಂತರ. ಆದರೆ ರಸ್ತೆಯ ತುಂಬೆಲ್ಲಾ ಜನರು ತುಂಬಿದ್ದರು. ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇಷ್ಟು ದೂರವನ್ನು ಕ್ರಮಿಸಲು 5 ಗಂಟೆ ಸಮಯ ಬೇಕಾಯಿತು. ಒಂದು ಹಂತದಲ್ಲಂತೂ ತಾಲಿಬಾನಿಗಳು ತಮ್ಮ ವಾಹನದಿಂದ ಕೆಳಗಿಳಿದು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ್ದರು. ನಾವು ಏರ್ ಪೋರ್ಟ್ ಗೆ ತಲುಪುತ್ತಿದ್ದಂತೆ ಅಮೆರಿಕ ಸೈನಿಕರು ನಮ್ಮನ್ನು ಭಾರತೀಯ ವಾಯುಪಡೆಯ ವಿಮಾನದೆಡೆಗೆ ಕರೆದೊಯ್ದು ಅಲ್ಲಿಂದ ಸುರಕ್ಷಿತವಾಗಿ ಮರಳಲು ನೆರವಾದರು. ತಾಲಿಬಾನಿಗಳು ಸೌಜನ್ಯಯುತವಾಗಿ ನಡೆದುಕೊಂಡರು ಆದರೆ ಅವರು ಮರಳುವಾಗ ನಮ್ಮ ಎರಡು ವಾಹನಗಳನ್ನು ಕೊಂಡೊಯ್ದರು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಹೊತ್ತ ವಾಯುಪಡೆಯ ಸಿ-17 ವಿಮಾನ ಮಂಗಳವಾರ ಮಧ್ಯಾಹ್ನ ಗುಜರಾತ್ ನ ಜಾಮ್ ನಗರದಲ್ಲಿ ಲ್ಯಾಂಡ್ ಆಗಿತ್ತು.