ಮದಗಜ.. ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ಆ್ಯಕ್ಷನ್ ಎಂಟರ್ಟೈನರ್ ಸಿನಿಮಾ. ಫೈನಲಿ ಮದಗಜ ಸಿಲ್ವರ್ ಸ್ಕ್ರೀನ್ ಮೇಲೆ ಘೀಳಿಟ್ಟಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕರು ಫಸ್ಟ್ ಡೇ ಸಿನಿಮಾ ನೋಡಿ ಥ್ರಿಲ್ಲಾಗಿದ್ದಾರೆ. ಇನ್ನು ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಸೆಲೆಬ್ರೇಷನ್ ಕೂಡ ಜೋರಾಗಿತ್ತು.. ಶ್ರೀಮುರಳಿ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು. ಅಷ್ಟಕ್ಕೂ ಮದಗಜ ಸಿನಿಮಾ ಹೇಗಿದೆ ? ಸಿನಿಮಾ ನೋಡಿ ಪ್ರೇಕ್ಷಕರು ಎಷ್ಟು ಮಾರ್ಕ್ಸ್ ಕೊಟ್ರು ? ಸಂಪೂರ್ಣ ವರದಿ ಇಲ್ಲಿದೆ…
ಹೈವೋಲ್ಟೇಜ್ ಆ್ಯಕ್ಷನ್ ಎಂಟರ್ಟೈನರ್ ಮದಗಜ ಸಿನಿಮಾ ರಾಜ್ಯಾದ್ಯಂತ ತೆರೆಗಪ್ಪಳಿಸಿದೆ. ಮಹೇಶ್ ಕುಮಾರ್ ಟೇಕಿಂಗ್, ಶ್ರೀಮುರಳಿ ರೋರಿಂಗ್ ನೋಡಿ ಸಿನಿರಸಿಕರು ಫಿದಾ ಆಗೋಗಿದ್ದಾರೆ. ಒಂದು ದಿನ ಮೊದ್ಲೇ ರಾಜ್ಯದ ಹಲವು ಥಿಯೇಟರ್ ಗಳಲ್ಲಿ ಎರಡು ಮೂರು ಶೋಗಳ ಟಿಕೆಟ್ಸ್ ಸೋಲ್ಡ್ಔಟ್ ಆಗಿತ್ತು. 800ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಮದಗಜ ದರ್ಬಾರ್ ಶುರುವಾಗಿದ್ದು, ಫಸ್ಟ್ ಡೇ ಸಿನಿಮಾ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ರು..
ಮದಗಜ ರಿಲೀಸ್ ಹಿನ್ನಲೆ ಥಿಯೇಟರ್ ಅಂಗಳದಲ್ಲಿ ಭರ್ಜರಿ ಸೆಲೆಬ್ರೇಷನ್ ಗೆ ಪ್ಲಾನ್ ಮಾಡಲಾಗಿತ್ತು. ನಟ ಶ್ರೀಮುರಳಿ ಫ್ಯಾಮಿಲಿ ಸಮೇತ ಸಿನಿಮಾ ನೋಡೋಕೆ ಗಾಂಧಿನಗರದ ಅನುಪಮಾ ಥಿಯೇಟರ್ ಗೆ ಬಂದಿದ್ರು. ನಿರ್ದೇಶಕ ಮಹೇಶ್ ಕುಮಾರ್, ನಾಯಕಿ ಆಶಿಕಾ ರಂಗನಾಥ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಖುಷಿಪಟ್ಟರು.
ಇನ್ನು ಸಿನಿಮಾ ಪ್ರದರ್ಶನಕ್ಕೂ ಮೊದ್ಲು ಥಿಯೇಟರ್ ಅಂಗಳದಲ್ಲಿ ರೋರಿಂಗ್ ಸ್ಟಾರ್ ಹವಾ ಜೋರಾಗಿತ್ತು.. ಡೈಲಾಗ್ ಹೊಡೆದು, ತಮಟೆ ತಾಳಕ್ಕೆ ಥಿಯೇಟರ್ ಮುಂದೆ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ಶ್ರೀಮುರಳಿ ಸಂಭ್ರಮಿಸಿದ್ರು.. ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು.
ಥಿಯೇಟರ್ ಸ್ಕ್ರೀನ್ಗೆ ಪೂಜೆ ಸಲ್ಲಿಸಿ, ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಲಾಯ್ತು. ವಾರಣಾಸಿಯಲ್ಲಿ ತೆರೆದುಕೊಳ್ಳುವ ಮದಗಜ ಕಥೆ ನಂತರ ಕರ್ನಾಟಕದಲ್ಲಿ ಮುಂದುವರೆಯುತ್ತೆ. ರೋರಿಂಗ್ ಸ್ಟಾರ್ ಮಾಸ್ ಎಂಟ್ರಿ, ಆ್ಯಕ್ಷನ್ ಧಮಾಕ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತೆ.
ಮದಗಜ ಸಿನಿಮಾ ಶಿವಗಢ ಮತ್ತು ಗಜೇಂದ್ರಗಢ ಅನ್ನುವ ಎರಡು ಊರಿನ ಕಥೆ. ಶಿವಗಢದ ಜನರಿಗಾಗಿ ಹೋರಾಡುವ ಭೈರವ ಮಗನನ್ನೇ ತ್ಯಾಗ ಮಾಡಿರ್ತಾನೆ. ಚಿಕ್ಕಂದಿನಲ್ಲೇ ತಾಯಿ ತಂದೆಯಿಂದ ದೂರಾಗುವ ನಾಯಕ ಸೂರ್ಯ ಮುಂದೆ ವಾರಣಾಸಿಯಲ್ಲಿ ಬೆಳೆದು ದೊಡ್ಡವನಾಗ್ತಾನೆ. ಮತ್ತೆ ತಂದೆ ತಾಯಿಯ ಮಡಿಲು ಸೇರುವ ನಾಯಕ, ತಾಯಿಗಾಗಿ, ತಾಯ್ನಾಡಿಗಾಗಿ ಏನೆಲ್ಲಾ ಸಾಹಸ ಮಾಡ್ತಾನೆ ಅನ್ನೋದೇ ಸಿನಿಮಾದ ಕಥೆ. ಮೇಲ್ನೋಟಕ್ಕೆ ಕಥೆ ಹಳೇಯದ್ದೇ ಅನ್ನಿಸಿದ್ರೂ, ಹೊಸ ರೀತಿಯಲ್ಲಿ ಕಟ್ಟಿಕೊಟ್ಟು ನಿರ್ದೇಶಕ ಮಹೇಶ್ ಕುಮಾರ್ ಸಕ್ಸಸ್ ಕಂಡಿದ್ದಾರೆ..
ವಿಲನ್ ರೋಲ್ ಗಳಲ್ಲೇ ಹೆಚ್ಚು ಅಬ್ಬರಿಸುವ ಜಗಪತಿ ಬಾಬು ಇಲ್ಲಿ ಬೇರೆಯದೇ ರೀತಿಯ ಪಾತ್ರವನ್ನ ಮಾಡಿದ್ದಾರೆ.. ಭೈರವನ ಪಾತ್ರದಲ್ಲಿ ಅವ್ರ ನಟನೆ ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತೆ.. ಖಡಕ್ ವಿಲನ್ ಆಗಿ ಗರುಡ ರಾಮ್ ಆರ್ಭಟ ಜೋರಾಗಿದೆ.. ಅವ್ರ ಲುಕ್, ಮ್ಯಾಜರಿಸಂ ಹುಬ್ಬೇರಿಸುವಂತಿದೆ.. ರಂಗಾಯಣ ರಘು ಗಂಭೀರ ಪಾತ್ರದಲ್ಲಿ ನೋಡುಗರ ಮನ ಗೆಲ್ತಾರೆ..
ಮದಗಜ ಚಿತ್ರದ ಪ್ರತಿ ದೃಶ್ಯವೂ ಕಣ್ಣಿಗೆ ಹಬ್ಬ. ರೋರಿಂಗ್ ಸ್ಟಾರ್ ಶ್ರೀಮುರಳಿ ಇಡೀ ಸಿನಿಮಾ ಖಡಕ್ ಲುಕ್ ನಲ್ಲಿ ದರ್ಶನ ಕೊಟ್ಟು ಪ್ರೇಕ್ಷಕರನ್ನ ರಂಜಿಸಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್ ನಲ್ಲಿ ಮದಗಜದಂತೆ ರೋರಿಂಗ್ ಸ್ಟಾರ್ ಅಬ್ಬರಿಸಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲೂ ಇಷ್ಟವಾಗ್ತಾರೆ..
ಹಳ್ಳಿ ಹುಡುಗಿಯಾಗಿ ಆಶಿಕಾ ರಂಗನಾಥ್ ಬಣ್ಣ ಹಚ್ಚಿ ಸೈ ಅನ್ನಿಸಿಕೊಂಡಿದ್ದಾರೆ.. ರವಿ ಬಸ್ರೂರು ಬ್ಯಾಗ್ರೌಂಡ್ ಸ್ಕೋರ್ ಮದಗಜ ಚಿತ್ರದ ಮತ್ತೊಂದು ಹೈಲೆಟ್.. ಫಸ್ಟ್ ಹಾಫ್ ನಲ್ಲಿ ಚಿಕ್ಕಣ್ಣ, ಶಿವರಾಜ್ ಕೆ. ಪೇಟೆ ಕಾಮಿಡಿ ಪ್ರೇಕ್ಷಕರನ್ನು ರಂಜಿಸುತ್ತೆ..
ಒಟ್ಟಾರೆ ಮದಗಜ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದೆ.. ಚಿತ್ರಕ್ಕೆ ಎಲ್ಲಾಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ತಿದ್ದು, ಮೊದಲ ದಿನವೇ ಹಲವೆಡೆ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ.. ಬಾಕ್ಸಾಫೀಸ್ ನಲ್ಲೂ ಮದಗಜ ಆರ್ಭಟ ಜೋರಾಗಿದ್ದು, ಮುಂದೆ ಸಿನಿಮಾ ಹೇಗೆಲ್ಲಾ ಸೌಂಡ್ ಮಾಡುತ್ತೋ ಕಾದು ನೋಡ್ಬೇಕು.