ಬೆಂಗಳೂರು: ಗೃಹ ಪ್ರವೇಶ ನಡೆಯುತ್ತಿದ್ದ ಮನೆಗೆ ನುಗ್ಗಿ ಮಂಗಳಮುಖಿಯರ ತಂಡ ಕೇಳಿದಷ್ಟು ಹಣ ಕೊಡಲಿಲ್ಲವೆಂದು ಪೂಜೆಗಾಗಿ ತಂದಿದ್ದ ವಸ್ತುಗಳನ್ನು ಎಸೆದು ರಂಪಾಟ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆಯಲ್ಲಿ ಘಟನೆ ನಡೆದಿದೆ. ಗೃಹ ಪ್ರವೇಶ ನಡೆಯುತ್ತಿದ್ದ ಮನೆಗೆ ನುಗ್ಗಿದ ಮಂಗಳಮುಖಿಯರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮನೆ ಮಾಲೀಕರು 1 ಸಾವಿರ ರೂ. ನೀಡಲು ಮುಂದಾಗಿದ್ದಾರೆ. ಇದಕ್ಕೆ ಒಪ್ಪದ ಮಂಗಳಮುಖಿಯರು ತಮಗೆ 25 ಸಾವಿರ ರೂ. ಬೇಕೆಂದು ಹಠ ಹಿಡಿದಿದ್ದಾರೆ. 25 ಸಾವಿರ ಕೊಡುವುದಕ್ಕೆ ಆಗುವುದಿಲ್ಲ ಎಂದು ಮನೆ ಮಾಲೀಕರು ತಿಳಿಸಿದ್ಧಾರೆ.
ಇದರಿಂದ ಸಿಟ್ಟಿಗೆದ್ದ ಮಂಗಳಮುಖಿಯರು ಮನೆಯಲ್ಲಿದ್ದ ಪೂಜೆ ಸಾಮಗ್ರಿಗಳು ಮತ್ತು ಇತರೆ ಸಾಮಗ್ರಿಗಳನ್ನು ಎಸೆದಿದ್ದಾರೆ. ಜೊತೆಗೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ಮನೆಯವರನ್ನು ನಿಂದಿಸಿದ್ದಾರೆ. ಲಕ್ಷ ಲಕ್ಷ ಖರ್ಚು ಮಾಡಿ ಮನೆ ಕಟ್ಟಿದ ಮಾಲೀಕನಿಗೆ ನೆಮ್ಮದಿಯಾಗಿ ಗೃಹ ಪ್ರವೇಶ ಮಾಡಲೂ ಅವಕಾಶ ನೀಡಲಿಲ್ಲ.
ಇತ್ತೀಚೆಗೆ ಮಂಗಳಮುಖಿಯರು ಮದುವೆ, ಗೃಹ ಪ್ರವೇಶ ಮತ್ತು ಇತರೆ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ತೆರಳಿ ಹಣ ನೀಡುವಂತೆ ಬೇಡಿಕೆ ಇಡುತ್ತಾರೆ. ತಾವು ಕೇಳಿದಷ್ಟು ಹಣ ನೀಡುವಂತೆ ಕಾಟ ಕೊಡುತ್ತಾರೆ. ಮರ್ಯಾದೆಗೆ ಅಂಜಿಯಾದರೂ ಅವರು ಹಣ ನೀಡುತ್ತಾರೆ ಎಂದು ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.