ಬಿಜೆಪಿ ಪಕ್ಷದವರು ಮಹಾ ಮೋಸಗಾರರು ಮತ್ತು ಸುಳ್ಳುಗಾರರು, ನಾವು ಅವರ ಕುರಿತು ಎಚ್ಚರಿಕೆಯಿಂದ ಇರಬೇಕು, ಅವರು ಸುಳ್ಳುಗಳನ್ನು ಹೇಳಿಯೇ ಜನರ ದಾರಿ ತಪ್ಪಿಸುತ್ತಿದ್ದಾರೆ. ಸಾಕಷ್ಟು ಜನರು ಅವರ ಸುಳ್ಳುಗಳನ್ನು ನಂಬಿ ದಾರಿ ತಪ್ಪಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ದಿ. ರಾಜೀವ್ ಗಾಂಧಿ ಹಾಗೂ ದಿ. ದೇವರಾಜು ಅರಸು ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿಯವರು ಮಹಾ ಮೋಸಗಾರರು ಮತ್ತು ಸುಳ್ಳುಗಾರರು, ನಾವು ಅವರ ಕುರಿತು ಎಚ್ಚರಿಕೆಯಿಂದ ಇರಬೇಕು. ಅವರು ಸುಳ್ಳು ಹೇಳಿಯೇ ಜನರ ದಾರಿ ತಪ್ಪಿಸುತ್ತಿದ್ದಾರೆ. ಈಗಾಗಲೇ ಹಿಂದುಳಿದ ವರ್ಗದ ಹಲವರು ದಾರಿ ತಪ್ಪಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಯಲ್ಲಿ ಮೀಸಲಾತಿ ಕೊಟ್ಟಾಗ ರಾಮಾ ಜೋಯಿಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರೇ ಈ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು. ಬಿಜೆಪಿ ಪಕ್ಷದ ಯಾರೊಬ್ಬರೂ ಆ ಸಂದರ್ಭದಲ್ಲಿ ರಾಮಾ ಜೋಯಿಸರನ್ನು ತಡೆದಿರಲಿಲ್ಲ. ಬಿಜೆಪಿ ನಾಯಕರೇ ರಾಮಾ ಜೋಯಿಸರ ಮೂಲಕ ಅರ್ಜಿ ಸಲ್ಲಿಸಿದ್ದರು. ಬಿಜೆಪಿಯವರು ಮೀಸಲಾತಿ ಪರ ಮಾತನಾಡಿರುವ ಒಂದೇ ಒಂದು ಸಂದರ್ಭವನ್ನು ಉಲ್ಲೇಖಿಸಲು ಸಾಧ್ಯವಿದೆಯೇ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.