ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಟ್ರೈನಿ ಕಂಡಕ್ಟರ್ ಬಸ್ ನಲ್ಲೇ ಕುಸಿದುಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಕೆಎಸ್ಸಾರ್ಟಿಸಿಯ ತರಬೇತಿಯಲ್ಲಿದ್ದ ಕಂಡಕ್ಟರ್ ಶಿವರಾಜ್ ಅಸ್ವಸ್ಥರಾಗಿ ಬಸ್ ನಲ್ಲೇ ಬಿದ್ದಿದ್ದಾರೆ.
ಭರಮಸಾಗರ ಮೂಲದ ಶಿವರಾಜ್ ಬಸ್ ನಲ್ಲಿ ಕುಸಿದು ಬಿದ್ದ ವೇಳೆ ಸೊಂಟದ ಭಾಗಕ್ಕೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಿವರಾಜ್, ಮೇಲಧಿಕಾರಿಗಳ ಒತ್ತಾಯಕ್ಕೆ ಮಣಿದು ಕೆಲಸಕ್ಕೆ ಹಾಜರಾಗಿದ್ದರು. ಚಿತ್ರದುರ್ಗದಿಂದ ಚಳ್ಳಕೆರೆ ಮಾರ್ಗದ ಕೆಎಸ್ಸಾರ್ಟಿಸಿ ಬಸ್ ಸೇವೆಗೆ ಬಂದಿದ್ದ ಶಿವರಾಜ್ ಇದೀಗ ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.