ಉಡುಪಿ: ಮುಂದಿನ ದಿನಗಳಲ್ಲಿ ಹಲವು ನಾಯಕರು ಬಿಜೆಪಿಗೆ ಸೇರುತ್ತಾರೆ. ಬಿಜೆಪಿಗೆ ಯಾರೇ ಬಂದರೂ ಪಕ್ಷದ ಬಾಗಿಲು ತೆರೆದಿರುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಕಾಲ ಕಾಲಕ್ಕೆ ಹಲವರು ನಮ್ಮ ಪಕ್ಷಕ್ಕೆ ಸೇರುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿದೇಶದಲ್ಲಿ ಅಪಾರ ಗೌರವ ಸಿಗುತ್ತಿದೆ. ಮೋದಿಯವರದ್ದು ಅಭಿವೃದ್ಧಿ, ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ, ಮೋದಿ ಅವರ ನೇತೃತ್ವವನ್ನು ಒಪ್ಪಿ ಹಲವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಇದನ್ನೂ ಓದಿ: ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ, ಬಿಜೆಪಿಯಲ್ಲಿಲ್ಲ… ಯು ಟರ್ನ್ ಹೊಡೆದ ಯತ್ನಾಳ್…
ಇನ್ನು ಒಳಜಗಳದಿಂದಾಗಿ ರಾಜ್ಯ ಕಾಂಗ್ರೆಸ್ ಅವನತಿಯತ್ತ ಸಾಗಿದೆ. ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್ ಗೆ ನೇತೃತ್ವ ಇಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತ್ಯಜಿಸುವ ಹಲವು ನಾಯಕರು ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ನಾಯಕರು ಬಿಜೆಪಿಯನ್ನು ಸೇರುತ್ತಾರೆ.
ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆಗಳ ಕುರಿತು ಎನ್ ಐ ಎ ತನಿಖೆ ನಡೆಯಲಿದೆ. ಈ ಘಟನೆಗಳ ಹಿಂದಿರುವವರು ಯಾರು ಎಂಬುದು ತನಿಖೆಯಿಂದ ಬಹಿರಂಗವಾಗಲಿದೆ. ಈ ರೀತಿಯ ಚಟುವಟಿಕೆ ಮಾಡುವವರಿಗೆ ಯಾವ ದೇಶದಲ್ಲಿ ಬೆಂಬಲ ಇದೆ? ನಮ್ಮ ದೇಶದವರ ಬೆಂಬಲ ಇದ್ದರೆ ಅದು ಯಾರು ಎಂಬ ಬಗ್ಗೆ ಎನ್ ಐ ಎ ತನಿಖೆ ಆಗಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ಧಾರೆ.