ಜುಬಾ: ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಆಫ್ರಿಕಾ ಖಂಡದ ಸೌತ್ ಸೂಡಾನ್ ದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸೌತ್ ಸೂಡಾನ್ ನ ಅಕುಯೆಲ್ ಯೋಲ್ ಎಂಬ ಪ್ರದೇಶದ ರುಂಬೆಕ್ ಈಸ್ಟ್ ಎಂಬಲ್ಲಿ ಮೇ ತಿಂಗಳ ಆರಂಭದಲ್ಲಿ ಘಟನೆ ನಡೆದಿದೆ. ಟಗರು 45 ವರ್ಷದ ಅಧಿಯು ಚಾಪಿಂಗ್ ಎಂಬ ಮಹಿಳೆಯ ಮೇಲೆ ದಾಳಿ ಮಾಡಿದ್ದು, ಆಕೆಗೆ ಹಲವು ಬಾರಿ ಗುದ್ದಿದೆ. ಇದರಿಂದಾಗಿ ಮಹಿಳೆಯ ಪಕ್ಕೆಲಬುಗಳು ಮುರಿದು ಆಕೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಟಗರನ್ನು ವಶಕ್ಕೆ ಪಡೆದಿದ್ದರು.
ಈ ಪ್ರಕರಣದಲ್ಲಿ ಟಗರಿನ ಮಾಲೀಕನ ತಪ್ಪಿಲ್ಲ, ಟಗರು ಮಹಿಳೆಯ ಮೇಲೆ ದಾಳಿ ಮಾಡಿ ಆಕೆಯನ್ನು ಕೊಂದಿದೆ. ಹಾಗಾಗಿ ಟಗರನ್ನು ಬಂಧಿಸಲಾಗಿದ್ದು, ಕೋರ್ಟ್ ಗೆ ಹಾಜರು ಪಡಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದರು.
ಈಗ ಈ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆದಿದ್ದು, ಜಡ್ಜ್ ಟಗರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದರೆ, ಟಗರಿನ ಮಾಲೀಕನಿಗೆ ಮೃತ ಮಹಿಳೆಯ ಕುಟುಂಬಕ್ಕೆ 5 ಹಸುಗಳನ್ನು ನೀಡುವಂತೆ ತೀರ್ಪು ನೀಡಿದ್ದಾರೆ. ಸೌತ್ ಸೂಡಾನ್ ನಲ್ಲಿರುವ ಕಾನೂನಿನ ಪ್ರಕಾರ ಯಾವುದೇ ಸಾಕು ಪ್ರಾಣಿ ಮನುಷ್ಯರನ್ನು ಕೊಂದರೆ ಅದನ್ನು ಪರಿಹಾರವಾಗಿ ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂರು ವರ್ಷ ಜೈಲು ಶಿಕ್ಷೆಯ ಬಳಿಕವೂ ಟಗರು ಅದರ ಮಾಲೀಕನಿಗೆ ದೊರೆಯುವುದಿಲ್ಲ. ಈ ಹಿಂದೆ ಅಮೆರಿಕದಲ್ಲಿ ಕುರಿಯೊಂದು 73 ವರ್ಷದ ವೃದ್ಧೆಗೆ ಗುದ್ದಿದ್ದರಿಂದ ವೃದ್ಧೆ ಮೃತಪಟ್ಟಿದ್ದರು.