ಮುಂಬೈ: ಕಳೆದ ಹಲವು ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ರೂಪಾಯಿ ಮೌಲ್ಯ ಇಂದು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ.
ಶುಕ್ರವಾರ ರೂಪಾಯಿ ಮೌಲ್ಯ 76.95 ರೂ. ಇತ್ತು.ಸೋಮವಾರದ ವಹಿವಾಟು ಆರಂಭವಾಗುತ್ತಿದ್ದಂತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದ್ದು 77.42 ರೂ.ಗೆ ತಲುಪಿದೆ. ಸೋಮವಾರ ಷೇರು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಮಾರಾಟದ ಒತ್ತಡ ಹೆಚ್ಚಿದ್ದರಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿತು. ವಿದೇಶಿ ಬಂಡವಾಳ ಹೂಡಿಕೆದಾರರು ಕಳೆದ ಹಲವು ದಿನಗಳಿಂದ ಬಂಡವಾಳ ಹಿಂಪಡೆಯುತ್ತಿರುವುದರಿಂದ ಷೇರು ಮಾರುಕಟ್ಟೆ ಕುಸಿಯುತ್ತಿದೆ. ಇದೇ ವೇಳೆ ರೂಪಾಯಿ ಮೌಲ್ಯದಲ್ಲೂ ದಾಖಲೆಯ ಕುಸಿತ ಉಂಟಾಗಿದೆ.
ಈ ವರ್ಷ ಕೇವಲ 4 ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಸುಮಾರು 17.7 ಬಿಲಿಯನ್ ಡಾಲರ್ ಹಿಂಪಡೆದಿದ್ದಾರೆ. ಜೊತೆಗೆ ಕಚ್ಚಾತೈಲ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ.