ಮುಂಬೈ: ಮುಂದಿನ ಐಪಿಎಲ್ ಸೀಸನ್ ಗೆ ಎರಡು ತಂಡಗಳು ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮೆಗಾ ಹರಾಜು ನಡೆಯಲಿದೆ. ಹಾಗಾಗಿ ಎಲ್ಲಾ ಐಪಿಎಲ್ ತಂಡಗಳಲ್ಲಿ ರಿಟೇನ್ ಆಗಲಿರುವ ಆಟಗಾರರು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದರ ನಡುವೆಯೇ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಫ್ರಾಂಚೈಸಿ ಮುಂದೆ ದೊಡ್ಡ ಬೇಡಿಕೆ ಇಟ್ಟಿದ್ದಾರೆ. ಇದರಿಂದಾಗಿ ಸನ್ ರೈಸರ್ಸ್ ಫ್ರಾಂಚೈಸಿ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿದು ಬಂದಿದೆ.
ನವೆಂಬರ್ 30 ರೊಳಗೆ ಎಲ್ಲಾ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕು. ಇದನ್ನು ಆಧರಿಸಿ ಮೆಗಾ ಹರಾಜಿಗೆ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಬಿಸಿಸಿಐ ರೂಪಿಸಿರುವ ನಿಯಮದಂತೆ ಫ್ರಾಂಚೈಸಿಗಳು ರಿಟೇನ್ ಮಾಡುವ ಮೊದಲ ಆಯ್ಕೆಯ ಆಟಗಾರನಿಗೆ 16 ಕೋಟಿ ರೂ, ಎರಡನೇ ಆಟಗಾರನಿಗೆ 12 ಕೋಟಿ ರೂ. ಮೂರನೇ ಆಟಗಾರನಿಗೆ 8 ಕೋಟಿ ರೂ. ಮತ್ತು ನಾಲ್ಕನೇ ಆಟಗಾರನಿಗೆ 4 ಕೋಟಿ ರೂ. ಪಾವತಿಸಬೇಕು.
ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಅಳೆದೂ ತೂಗಿ ರಿಟೇನ್ ಮಾಡಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಇದರ ಬೆನ್ನಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಫ್ರಾಂಚೈಸಿ ಮುಂದೆ ದೊಡ್ಡ ಬೇಡಿಕೆ ಇಟ್ಟಿದ್ಧಾರೆ. ರಶೀದ್ ತಮ್ಮನ್ನು ಮೊದಲ ಆಯ್ಕೆಯ ಆಟಗಾರನಾಗಿ ರಿಟೇನ್ ಮಾಡಬೇಕು. ಅಂದರೆ ತಮಗೆ 16 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರನ್ನು ಮೊದಲ ಆಯ್ಕೆ ಆಟಗಾರನಾಗಿ ರಿಟೇನ್ ಮಾಡಲು ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ರಶೀದ್ ಮತ್ತು ಫ್ರಾಂಚೈಸಿ ನಡುವೆ ಸಂಘರ್ಷವೇರ್ಪಟ್ಟಿದೆ.
ಇದನ್ನೂ ಓದಿ: ಗೌತಮ್ ಗಂಭೀರ್ ಗೆ ಮತ್ತೆ ಜೀವ ಬೆದರಿಕೆ… ವಾರದಲ್ಲಿ ಮೂರನೇ ಬಾರಿ ಬೆದರಿಕೆ ಮೇಲ್ ಕಳುಹಿಸಿದ ಉಗ್ರರು..
ರಶೀದ್ ಖಾನ್ ವಿಶ್ವದ ಅತ್ಯುತ್ತಮ ಟಿ20 ಬೌಲರ್ ಗಳಲ್ಲಿ ಒಬ್ಬರು. ಅವರು ಐಪಿಎಲ್ ನಲ್ಲಿ ಅತಿ ಕಡಿಮೆ ರನ್ ಬಿಟ್ಟುಕೊಟ್ಟಿರುವ ಬೌಲರ್ ಎಂಬ ದಾಖಲೆಯನ್ನೂ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಶೀದ್ ಖಾನ್ ಹರಾಜಿನಲ್ಲಿ ಲಭ್ಯರಾದರೆ ಭಾರಿ ಮೊತ್ತಕ್ಕೆ ಖರೀದಿಸಲು ಫ್ರಾಂಚೈಸಿಗಳು ರೆಡಿಯಾಗಿವೆ. ಇದೇ ವೇಳೆ ತಂಡದ ಬೆಸ್ಟ್ ಬೌಲರ್ ಅನ್ನು ರಿಟೇನ್ ಮಾಡುವ ಕುರಿತು ಸನ್ ರೈಸರ್ಸ್ ತಂಡ ಚಿಂತಿಸುತ್ತಿದೆ. ಆದರೆ 9 ಕೋಟಿ ರೂ. ಪಡೆಯುತ್ತಿದ್ದ ರಶೀದ್ ಏಕಾಏಕಿ 16 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಕೇನ್ ವಿಲಿಯಮ್ಸನ್ ಜೊತೆ ಪೈಪೋಟಿಗೆ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಸನ್ ರೈಸರ್ಸ್ ತಂಡಕ್ಕೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.