ಟ್ರ್ಯಾಕ್ಟರ್ ಚಾಲನಾ ಪರವಾನಗಿ ಪಡೆದು ಜಮೀನು ಉಳುಮೆ ಮಾಡಿದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಕೃಷಿ ಮಹಿಳೆ ಎಸ್.ವಿ.ಸುಮಂಗಲಮ್ಮ (69) ಅವರು ಹೃದಯಾಘಾತದಿಂದ ಬುಧವಾರ ನಿಧನರಾದರು.
ಮೂಲತಃ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಸುಮಂಗಲಮ್ಮ ಕೃಷಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರು. ಸುಮಾರು 70 ಎಕರೆ ಒಣ ಭೂಮಿಯಲ್ಲಿ ತೆಂಗಿನ ತೋಟ ನಿರ್ಮಿಸಿ ಮಾದರಿಯಾಗಿದ್ದರು. ಇವರು 60ಕ್ಕೂ ಹೆಚ್ಚು ಸ್ಥಳೀಯ ಕೃಷಿ ಕಾರ್ಮಿಕರಿಗೆ ಕೆಲಸ ನೀಡಿದ್ದರು. ಅಲ್ಲದೆ ಸುಮಂಗಲಮ್ಮ ಅವರು ಕಳೆದ 40 ವರ್ಷಗಳಿಂದ ಎಲ್ಲ ವಿಧದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು,
ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿದ ರಾಜ್ಯ ಸರ್ಕಾರ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ‘ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆಯಲ್ಲಿ ಪರವಾನಿಗೆ ಪಡೆದ ಪ್ರಥಮ ಮಹಿಳೆ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರಿಗೆ ಆಸ್ಪಿ ಎಲ್.ಎಮ್. ಪಟೇಲ್ ಸಂಸ್ಥೆಯಿಂದ 2010ನೇ ಸಾಲಿನ ‘ಅತ್ಯುತ್ತಮ ರೇಷ್ಮೆ ಬೆಳೆಗಾರ’ ರಾಷ್ಟ್ರೀಯ ಪುರಸ್ಕೃತ ಪ್ರಶಸ್ತಿ ಬಂದಿತ್ತು, ರೇಷ್ಮೆ ಬೆಳೆ ಅಭಿವೃದ್ಧಿಯಲ್ಲಿ ಕೇಂದ್ರಿಯ ರೇಷ್ಮೆ ಮಂಡಳಿ ನೀಡುವ 1995- 96 ನೇ ಸಾಲಿನ ಉತ್ತಮ ಮಹಿಳಾ ಉದ್ಯಮಶೀಲತೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು.
ಕೋಟೆನಾಡಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಸಮುದಾಯಕ್ಕೆ ಉತ್ತಮ ಪ್ರೇರಕರಾಗಿ ಆಯ್ಕೆಯಾಗಿದ್ದರು. 2007-08 ನೇ ಸಾಲಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಿಂದ ರೈತರ ಒಕ್ಕೂಟದ ಅಭಿವೃದ್ಧಿಗೆ ಉತ್ತಮ ಸಾಧನೆ ಪ್ರಶಸ್ತಿ ಪಡೆದ್ದರು. ಹೀಗಾಗಿ ಇವರ ಕುಟುಂಬವನ್ನು ‘ಕೃಷಿ ವಿಜ್ಞಾನ ಪದವೀಧರರ ಕುಟುಂಬ’ ಎಂದೇ ಖ್ಯಾತಿ ಪಡೆದಿತ್ತು. ಇವರ ಅಪಾರ ಸಾಧನೆ ಪರಿಗಣಿಸಿ ಸರ್ಕಾರ ಇದೀಗ ರಾಜ್ಯೋತ್ಸವ ಪ್ರಶಸ್ತಿ ನೀಡಿತು.
ಇವರಿಗೆ ಪತಿ ವೀರಭದ್ರಪ್ಪ, ಪುತ್ರ ಹಾಗೂ ಪುತ್ರಿ ಇದ್ದಾರೆ. ತೋಟದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.