ಬೆಂಗಳೂರು: ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ ಹೆಚ್ಚಿತ್ತು. ರಾಜ್ಯದಲ್ಲಿ ಸಾವಿರಾರು ಜನರು ಕೊರೊನಾಗೆ ಬಲಿಯಾಗಿದ್ದರು. ಈ ಸಂದರ್ಭದಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕೊರೊನಾ ಎರಡನೇ ಅಲೆ ಕಡಿಮೆಯಾಗಿ ಹಲವು ತಿಂಗಳುಗಳೇ ಕಳೆದಿವೆ. ಈಗ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಕೊರೊನಾದಿಂದ ಮೃತಪಟ್ಟ ಇಬ್ಬರ ಮೃತ ದೇಹ 7 ತಿಂಗಳಿಂದ ಮಾರ್ಚರಿಯಲ್ಲೇ ಕೊಳೆತಿವೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ 94 ಪ್ರಯಾಣಿಕರು ಬೆಂಗಳೂರಿಗೆ ಆಗಮನ… ಇಬ್ಬರಲ್ಲಿ ಕೊರೊನಾ ಸೊಂಕು ಪತ್ತೆ…
ರಾಜಾಜಿನಗರದಲ್ಲಿರುವ ಇ ಎಸ್ ಐ ಆಸ್ಪತ್ರೆಯಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಮೃತಪಟ್ಟಿದ್ದ ಒಬ್ಬ ಮಹಿಳೆ ಮತ್ತು ಒಬ್ಬ ವೃದ್ಧನ ಮೃತದೇಹವನ್ನು ಆಸ್ಪತ್ರೆ ಸಿಬ್ಬಂದಿ ಶವಾಗಾರದಲ್ಲಿ ಇಟ್ಟಿದ್ದರು. ಆದರೆ ಆ ಬಳಿಕ ಹೊಸ ಶವಾಗಾರ ಸಿದ್ಧವಾದ ಬಳಿಕ ಹಳೆಯ ಶವಾಗಾರದತ್ತ ಸಿಬ್ಬಂದಿ ತಲೆ ಹಾಕಿರಲಿಲ್ಲ. ಜೊತೆಗೆ ಬೇಜವಾಬ್ದಾರಿ ತನದಲ್ಲಿ ಹಳೆಯ ಶವಾಗಾರದಲ್ಲಿದ್ದ ಶವಗಳನ್ನು ಪರಿಶೀಲಿಸದೆ ಶವಾಗಾರಕ್ಕೆ ಬೀಗ ಹಾಕಿದ್ದರು.
ನಿನ್ನೆ ಹೌಸ್ ಕೀಪಿಂಗ್ ಸಿಬ್ಬಂದಿ ಹಳೆಯ ಶವಾಗಾರವನ್ನು ಕ್ಲೀನ್ ಮಾಡುವಾಗ ಎರಡು ಶವಗಳು ಅಲ್ಲಿರುವುದು ಪತ್ತೆಯಾಗಿದೆ. ಪ್ಯಾಕ್ ಮಾಡಿ ಇಟ್ಟಿದ್ದ ಮೃತದೇಹಗಳು ಪತ್ತೆಯಾದ ಬಳಿಕ ಅವುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ UDR ಕೇಸ್ ದಾಖಲಾಗಿದೆ.