ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ಬೆಳೆನಾಶವಾಗುತ್ತಿವೆ. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಕೆರೆ, ನದಿ, ಹಳ್ಳಗಳು ಉಕ್ಕಿ ಹರಿಯುತ್ತಿವೆ.
ಇದನ್ನೂ ಓದಿ: ನಿರಂತರ ಮಳೆಗೆ ಜನಜೀವನ ತತ್ತರ… ನೆಲಮಂಗಲದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ನೆಲಸಮ…
ಬೆಂಗಳೂರಿನ ಕೆಆರ್ ಪುರ ಬಳಿಯಿರುವ ಭಟ್ಟರಹಳ್ಳಿ Rto ಕಚೇರಿಗೆ ಮಳೆ ನೀರು ನುಗ್ಗಿದೆ. ವಾಹನಗಳೂ ನೀರಿನಲ್ಲಿ ನಿಂತು ಸಿಬ್ಬಂದಿ ಪರದಾಡಿದರು. ಕಚೇರಿಗೆ ಬಂದು ಹೋಗಲು ಜನರು ಹರಸಾಹಸ ಮಾಡಬೇಕಾಯಿತು.
ಚಿಕ್ಕಬಳ್ಳಾಪುರ ಜಿಲ್ಲೆಯಂತೂ ಜಲಪ್ರಳಯಕ್ಕೆ ಅಲ್ಲೋಲ-ಕಲ್ಲೋಲವಾಗಿದೆ. ಬಾಗೇಪಲ್ಲಿ ತಾಲ್ಲೂಕು ಕೊತ್ತಕೋಟೆ, ಮುಮ್ಮಡಿವಾರಪಲ್ಲಿ, ಮಾಡಪಲ್ಲಿ, ಹೊನ್ನಂಪಲ್ಲಿ, ಕೃಷ್ಣಾಪುರ ಸೇರಿದಂತೆ ಹಲವೆಡೆ ಬೆಳೆಗಳು ಹಾನಿಯಾಗಿವೆ. ಸಾವಿರಾರು ಎಕರೆ ಜಲಾವೃತವಾಗಿದೆ. ಬಹುತೇಕ ಎಲ್ಲಾ ಕೆರೆಗಳೂ ಭರ್ತಿಯಾಗಿರುವುದರಿಂದ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿವೆ.
ಗಣಿ ನಾಡು ಬಳ್ಳಾರಿಯಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ರಾತ್ರಿಯಿಂದ ಸುರಿದ ಮಳೆಗೆ ರೇಣುಕಾ ನಗರದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಎಸ್ಎನ್ ಪೇಟೆ ಸೇತುವೆಯಲ್ಲಿ ಕಾರು ಸಿಲುಕಿತ್ತು. ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಕಟಾವಿನ ಬಳಿಕ ಒಣಗಿಸಲು ಹಾಕಿದ್ದ ಮೆಣಸಿನಕಾಯಿ ನೀರಿನಲ್ಲಿ ನೆನೆದಿದೆ. ಸುಮಾರು 9 ಲಕ್ಷಕ್ಕೂ ಅಧಿಕ ಮೌಲ್ಯದ ಮೆಣಸಿನಕಾಯಿ ಹಾಳಾಗಿದೆ.
ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಮಳೆ ಹೊಡೆತಕ್ಕೆ ಮನೆಯೊಂದು ಕುಸಿದಿದೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರಿಂದ ಮನೆಯಲ್ಲಿದ್ದ ಐವರ ಪ್ರಾಣ ಉಳಿದಿದೆ. ಮಹದೇವರಾವ್, ನಾಗರತ್ನ, ಅಕ್ಷಯ್, ಪೃಥ್ವಿ ಹಾಗೂ ವೃದ್ದೆ ನೀಲಮ್ಮ ಭಾಯಿ ಅವರನ್ನು ರಕ್ಷಣೆ ಮಾಡಲಾಗಿದೆ. ಅಶೋಕನಗರ ಸೇರಿದಂತೆ ಮೈಸೂರಿನ ಹಲವೆಡೆ ಕಳೆದ ನಾಲ್ಕೈದು ದಿನಗಳಿಂದ ಭಾರೀ ಹಾನಿ ಆಗ್ತಾ ಇದೆ.
ಇದನ್ನೂ ಓದಿ: ತಿರುಪತಿಯಲ್ಲಿ ರಣಭಯಂಕರ ಮಳೆ.. ಪ್ರವಾಹ…! ಇನ್ನೂ ಮೂರು ದಿನ ತಿರುಪತಿ ಕಡೆಗೆ ಹೋಗ್ಬೇಡಿ…!