ಚಿಕ್ಕೋಡಿ: ಚಿಕ್ಕಮಕ್ಕಳನ್ನು ಕರೆದುಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನ ಹಿರಿಯ ನ್ಯಾಯಾಧೀಶರೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಮಾಯಕ್ಕಾ ದೇವಸ್ಥಾನದ ಆವರಣದಲ್ಲಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಮಹಿಳೆಯೊಬ್ಬರು ಭಿಕ್ಷೆ ಬೇಡುತ್ತಿದ್ದರು. ಈ ವೇಳೆಗೆ ದೇವಸ್ಥಾನಕ್ಕೆಂದು ಆಗಮಿಸಿದ್ದ ರಾಯಭಾಗದ ಹಿರಿಯ ನ್ಯಾಯಾಧೀಶ ಕೆ. ಎಂ.ಬಸವರಾಜಪ್ಪ ಮಹಿಳೆಯನ್ನು ಕರೆಸಿ ಯಾಕೆ ಮಕ್ಕಳನ್ನ ಕರೆದುಕೊಂಡು ಭಿಕ್ಷೆ ಬೇಡುತ್ತಿದ್ದೀರಿ. ಎಲ್ಲಾದರೂ ಕೆಲಸ ಮಾಡಿ ಜೀವನ ಸಾಗಿಸಿ. ನಿಮ್ಮ ಮಕ್ಕಳ ಭವಿಷ್ಯವನ್ನ ನೀವು ಹಾಳು ಮಾಡುತ್ತಿದ್ದೀರಿ ಎಂದು ಗದರಿಸಿದರು.
ಇದನ್ನೂ ಓದಿ: ಅಥಣಿಯಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಜವಾರಿ ಆಕಳು… ಇದು ದೇವರ ಪವಾಡ ಎಂದ ಗ್ರಾಮಸ್ಥರು…
ಇದಲ್ಲದೇ ನಿಮಗೆ ನಿಮ್ಮ ಮಕ್ಕಳನ್ನು ಸಾಕಲು ಆಗೊದಿಲ್ಲ ಅಂದ್ರೆ ನಿಮ್ಮ ಮಕ್ಕಳನ್ನು ನಾನೇ ಕರೆದುಕೊಂಡು ಹೋಗಿ ಸಾಕುತ್ತೇನೆ. ಮಕ್ಕಳನ್ನು ಸಾಕಲು ನಮ್ಮಲ್ಲಿ ಒಳ್ಳೆಯ ವ್ಯವಸ್ಥೆ ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ದೇವಸ್ಥಾನದ ಆವರಣದಲ್ಲೇ ಮಕ್ಕಳು ಭಿಕ್ಷೆ ಬೇಡುತ್ತಿದ್ದರೂ, ಅವರನ್ನು ನೋಡಿ ಸುಮ್ಮನಿದ್ದ ಪೊಲೀಸರನ್ನೂ ಬಿಡದ ನ್ಯಾಯಾಧೀಶರು, ಮಕ್ಕಳು ಭಿಕ್ಷೆ ಬೇಡುತ್ತಿದ್ದರೂ ನೋಡಿಕೊಂಡು ಸುಮ್ಮನೇ ಏಕೆ ಇದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಸ್ಥಳ: ಚಿಕ್ಕೋಡಿ
ವರದಿ: ಅಜೀತ್ ಸಣ್ಣಕ್ಕಿ