ಬೆಂಗಳೂರು: PSI ನೇಮಕಾತಿ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ರಚನಾ 3 ದಿನದಿಂದ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಕುಟುಂಬಸ್ಥರ ಕಣ್ಣೀರಿಡುತ್ತಿದ್ದಾರೆ.
ರಚನಾ ಜತೆ ತೆರಳಿದ್ದ ಸಹೋದರ ವಿಕ್ರಮ್ ಮೊಬೈಲ್ ಸ್ವಿಚ್ಆಫ್ ಆಗಿದ್ದು, ವಿಜಯಪುರದಲ್ಲಿ ರಚನಾ ದೊಡ್ಡಮ್ಮ ಕಸ್ತೂರಿಬಾಯಿ ಕಣ್ಣೀರಿಡುತ್ತಿದ್ದಾರೆ. ಬಸವನ ಬಾಗೇವಾಡಿ ಪಟ್ಟಣದಲ್ಲಿ ರಚನಾ ಕುಟುಂಬಸ್ಥರಿದ್ದು, ರಚನಾ ತಾಯಿ ಸಾವಿತ್ರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಚನಾ ಮುತ್ತಲಗೇರಿ ದೊಡಮ್ಮನ ಮನೆಯಲ್ಲೇ ಉಳಿದು ಶಿಕ್ಷಣ ಪಡೆದಿದ್ದರು. ಕಳೆದ 3 ದಿನಗಳಿಂದ ರಚನಾ ಸಂಪರ್ಕ ಇಲ್ಲದೆ ದೊಡ್ಡಮ್ಮ ಕಂಗಾಲಾಗಿದ್ದಾರೆ. ನಮ್ಮ ಮಗಳು ಶಾಲೆಯಲ್ಲಿ ಯಾವತ್ತಿಗೂ ಮೊದಲ ಸ್ಥಾನ ಪಡೆಯುತ್ತಿದ್ದಳು, ದುಡಿದು ಜೀವನ ನಡೆಸುವ ನಮಗೆ ಅಷ್ಟು ಹಣ ಎಲ್ಲಿಂದ ಬರುತ್ತೆ. ಸರ್ಕಾರ ತಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ, ಈ ಹಿಂದೆ ಎರಡು ಸಲ ರಚನಾ ಪಿಎಸ್ಐ ಪರೀಕ್ಷೆ ಬರೆದಿದ್ದಳು, ಆದರೆ ಆಗ ಕೆಲವೇ ಅಂಕಗಳಿಂದ ಅವಕಾಶ ತಪ್ಪಿ ಹೋಗಿತ್ತು. ಇನ್ನೂ 10 ಸಲ ಬೇಕಾದ್ರೂ ಆಕೆ ಪರೀಕ್ಷೆ ಬರೆಯಲು ತಯಾರಿದ್ದಳು ಎಂದು ರಚನಾ ಮುತ್ತಲಗೇರಿ ದೊಡ್ಡಮ್ಮ ಕಸ್ತೂರಿಬಾಯಿ ತಮ್ಮ ಅಳಲು ತೋಡಿಕೊಂಡಿದ್ದಾರೆ.