ಮೈಸೂರು: ಎರಡು ದಿನಗಳ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ (Chamundi HIlls) ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರಿನಿಂದ ಸಂಜೆ ಮೈಸೂರಿಗೆ ಆಗಮಿಸಿದ ಮೋದಿ ಅವರು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲಿ ಅವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ಬಳಿಕ ಅವರು ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ 8.15ರ ಸುಮಾರಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದು, ನಾಡದೇವತೆಯ ದರ್ಶನ ಪಡೆದರು.
ದೇಗುಲಕ್ಕೆ ಆಗಮಿಸಿದ ಮೋದಿ ಅವರಿಗೆ ದೇವಾಲಯದ ಪ್ರಧಾನ ಅರ್ಚಕರು ಪ್ರಧಾನಿಗೆ ಸ್ವಾಗತ ಕೋರಿದರು. ಈ ವೇಳೆ ಮೋದಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೊಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಹಲವರು ಸಾಥ್ ನೀಡಿದರು.