ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ.
ವಿಜಯ್ ಸೇತುಪತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಲು ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದ ಹೊರಗೆ ಬರುವಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ವಿಜಯ್ ಸೇತುಪತಿ ಪಕ್ಕದಲ್ಲಿದ್ದ ವ್ಯಕ್ತಿಗೆ ಏಕಾಏಕಿ ಒದ್ದಿದ್ದಾನೆ. ತಕ್ಷಣ ಸೇತುಪತಿ ಜೊತೆಯಲ್ಲಿದ್ದ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಅಷ್ಟಕ್ಕೂ ವಿಮಾನದ ಒಳಗೇ ಜಗಳ ಶುರುವಾಗಿತ್ತು. ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ವ್ಯಕ್ತಿ ವಿಮಾನದೊಳಗೆ ಮದ್ಯಪಾನ ಮಾಡಿ ಕಿರಿಕ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸೇತುಪತಿ ಸಹ ಪ್ರಯಾಣಿಕನಿಗೆ ಬುದ್ದಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಮಾನದಿಂದ ಹೊರಬರುತ್ತಿದ್ದಂತೆ ಆತ ಸೇತುಪತಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ.