ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರವಾಗಿದ್ದು, ಮುಖ್ಯಮಂತ್ರಿ ಉದ್ಧರ್ ಠಾಕ್ರೆ (Uddhav Thackeray) ಕರೆದಿದ್ದ ಸಭೆಗೆ ಕೇವಲ 13 ಶಾಸಕರು ಮಾತ್ರ ಹಾಜರಾಗಿದ್ದರು. ಇದೇ ವೇಳೆ ಏಕನಾಥ್ ಶಿಂಧೆ (Eknath Shinde) 42 ಶಾಸಕರ ಬೆಂಬಲವನ್ನು ತೋರಿಸಿದ್ದಾರೆ.
ಇಂದು ಉದ್ಧವ್ ಠಾಕ್ರೆ ಕರೆದಿದ್ದ ಸಭೆಗೆ ಕೇವಲ 13 ಶಾಸಕರು ಮಾತ್ರ ಹಾಜರಾಗಿದ್ದರು, ಇನ್ನು ಶಿವಸೇನೆಯ 14 ಸಂಸದರೂ ಸಹ ಸಭೆಗೆ ಬಂದಿರಲಿಲ್ಲ. ಶಾಸಕರು ಮತ್ತು ಸಂದರು ನೀಡಿದ ಶಾಕ್ ಗೆ ಉದ್ಧವ್ ಠಾಕ್ರೆ ಕಂಗಾಲ್ ಆಗಿದ್ದಾರೆ.
ಇದೇ ವೇಳೆ ಏಕನಾಥ್ ಶಿಂಧೆ ಗುವಾಹತಿಯ ಹೋಟೆಲ್ ನಿಂದ ಲೈವ್ ಬಂದಿದ್ದು, ತಮಗೆ 42 ಶಾಸಕರ ಬೆಂಬಲ ಇರುವುದನ್ನು ತೋರಿಸಿದ್ದಾರೆ. ಶಿವಸೇನೆಯ 35 ಶಾಸಕರು ಮತ್ತು 7 ಪಕ್ಷೇತರ ಶಾಸಕರ ಜೊತೆ ಅವರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, 42 ಶಾಸಕರ ಬಲದ ಪತ್ರ ರಾಜ್ಯಪಾಲರಿಗೆ ತಲುಪಿಸಲು ಶಿಂಧೆ ತಯಾರಿ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಾರಾ? ಮಹಾರಾಷ್ಟ್ರ ಸರ್ಕಾರ ಇಂದೇ ಪತನವಾಗುತ್ತಾ ಎಂಬ ಪ್ರಶ್ನೆಗಳು ಕಾಡುತ್ತಿವೆ.