ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ (Narendra Modi) ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದ್ದು, ವಿವಿಧ ಸರ್ಕಾರಿ ಯೋಜನೆಗಳ ಲೋಕಾರ್ಪಣೆ ಮಾಡಿದ್ದಾರೆ ಹಾಗೂ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಕೊಮ್ಮಘಟ್ಟ (Kommaghatta) ದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ನಡೆಯುತ್ತಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾಗಿದ್ದಾರೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗಳು ಮತ್ತು NHAI ಯೋಜನೆಗಳ ಪ್ರದರ್ಶನವನ್ನು ವೀಕ್ಷಿಸಿ, ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಯಲಹಂಕ- ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಹಾಗೂ 100% ವಿದ್ಯುದೀಕರಣಗೊಂಡ ಕೊಂಕಣ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ತುಮಕೂರು, ಅರಸೀಕೆರೆ, ಯಲಹಂಕ, ರತ್ನಗಿರಿ, ಮಡಗಾಂವ್ ಮತ್ತು ಉಡುಪಿಗೆ ಹೊಸ ರೈಲು ಸೇವೆಗೆ ವಿಡಿಯೋ ಲಿಂಕ್ ಮೂಲಕ ಹಸಿರು ನಿಶಾನೆಯನ್ನು ತೋರಿದ್ದಾರೆ.
ಬೆಂಗಳೂರು ಉಪ ನಗರ ರೈಲು ಯೋಜನೆ, ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ, ಬೆಂಗಳೂರಿನ ವರ್ತುಲ ರಸ್ತೆ-2 ಪ್ಯಾಕೇಜ್‌ಗಳು, ನೆಲಮಂಗಲ ತುಮಕೂರು ವಿಭಾಗದ 6-ಲೈನಿಂಗ್, NH-73 ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ಭಾಗದವರೆಗೂ ರಸ್ತೆ ಅಗಲೀಕರಣ, NH-69 ರ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ ವಿಭಾಗದ ಪುನರ್ವಸತಿ ಮತ್ತು ಉನ್ನತೀಕರಣ, ಬೆಂಗಳೂರಿನಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಬೆಂಗಳೂರು ಉಪ ನಗರ ರೈಲು ಯೋಜನೆಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೊಹ್ಲೋಟ್, ಕೇಂದ್ರ ಮಂತ್ರಿಗಳಾದ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದರಾದ ಪಿ.ಸಿ. ಮೋಹನ್, ಡಿ.ವಿ. ಸದಾನಂದಗೌಡ, ಎಲ್.ಎಸ್. ತೇಜಸ್ವಿ ಸೂರ್ಯ, ಸಚಿವರಾದ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಮಳೆಯಿಂದಾಗಿ ಭಾರತ, ದಕ್ಷಿಣ ಆಫ್ರಿಕಾ ಪಂದ್ಯ ರದ್ದು… ಟಿಕೆಟ್ ಮೊತ್ತದ 50% ವಾಪಸ್ ನೀಡಲಿದೆ KSCA…