ಅಮೆರಿಕ ಸೇನೆ ಮತ್ತು ನ್ಯಾಟೋ ಪಡೆಗಳು ದೇಶ ತೊರೆಯುತ್ತಿದ್ದಂತೆಯೇ ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿದ ತಾಲಿಬಾನಿ ಉಗ್ರರು 20 ವರ್ಷಗಳ ಬಳಿಕ ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಹಾಗಾಗಿ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾಲಯ ನೈತಿಕ ಬೆಂಬಲ ನೀಡಿದೆ.
ಇಂದು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಮೈಸೂರು ವಿವಿ ಉಪಕುಲಪತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆ ಬಳಿಕ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿಗಳು ‘ನಮ್ಮ ಕುಟುಂಬಸ್ಥರೊಂದಿಗೆ ಮಾತನಾಡಿದ್ದೇವೆ. ಅವರು ಮನೆಯಿಂದ ಹೊರಬರದಂತಹ ಪರಿಸ್ಥಿತಿ ಉಂಟಾಗಿದೆ. ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗಿದೆ. ಅಲ್ಲಿ ಶೀಘ್ರದಲ್ಲೇ ಅಶಾಂತಿಯ ವಾತಾವರಣ ತಿಳಿಗೊಂಡು ಶಾಂತಿ ನೆಲೆಸುವ ಭರವಸೆ ಇದೆ. ನಮ್ಮ ಕುಟುಂಬಸ್ಥರೂ ಸಹ ಓದನ್ನು ಬಿಡಬೇಡಿ. ನಮ್ಮ ಬಗ್ಗೆ ಹೆಚ್ಚು ಚಿಂತಿಸಬೇಡಿ, ಸದ್ಯಕ್ಕೆ ನಾವು ಕ್ಷೇಮವಾಗಿದ್ದೇವೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವೀಸಾ ಅವಧಿ ಕೆಲವೇ ತಿಂಗಳುಗಳಲ್ಲಿ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನಮ್ಮ ನೆರವಿಗೆ ಬರುವ ವಿಶ್ವಾಸವಿದೆ. ಮೈಸೂರು ವಿವಿ ಸಹ ನಮ್ಮ ಕುಟುಂಬದಂತೆ ಇರಲಿದೆ ಎಂದು ಭರವಸೆ ನೀಡಿದೆ. ಜೊತೆಗೆ ನಮಗೆ ನೈತಿಕ ಬೆಂಬಲವನ್ನೂ ನೀಡಿದೆ. ಈ ಹಿನ್ನೆಲೆಯಲ್ಲಿ ನಾವು ಭಾರತ ಮತ್ತು ಮೈಸೂರು ವಿವಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.