ಧಾರವಾಡ: ನವೀನ್ ಮೃತದೇಹ ತರುವ ವಿಚಾರದಲ್ಲಿ ಶಾಸಕರ ಅರವಿಂದ ಬೆಲ್ಲದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಮಾನದಲ್ಲಿ ಮೃತದೇಹ ತರಲು ಈಗ ಕಷ್ಟ ಸಾಧ್ಯ, ಜೀವಂತ ಇರುವವರನ್ನೇ ಕರೆತರಲು ಸರ್ವ ಪ್ರಯತ್ನ ಆಗುತ್ತಿದೆ. ಒಂದು ಮೃತದೇಹ ತರುವ ಜಾಗದಲ್ಲಿ 8 ಮಂದಿ ಕರೆತರಬಹುದು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಅಲ್ಲಿ ಯುದ್ದ ಭೂಮಿ ಇದೆ, ಸಾಧ್ಯವಾದರೆ ತರಬಹುದು. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ ಬೇಕಾಗುತ್ತೆ, ವಿದ್ಯಾರ್ಥಿಗಳನ್ನು ಕರೆತರಲು ವಿದೇಶಾಂಗ ಇಲಾಖೆ ಪ್ರಯತ್ನ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿಯವರೇ ಮುತುವರ್ಜಿ ವಹಿಸಿದ್ದಾರೆ. ರೊಮೇನಿಯಾಗೆ ಬಹುತೇಕ ವಿದ್ಯಾರ್ಥಿಗಳು ಬಂದಿದ್ದಾರೆ, ವಿದೇಶಾಂಗ ಇಲಾಖೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿದೆ ಎಂದು ಹೇಳಿದ್ದಾರೆ.
ನಮ್ಮ ವಿದ್ಯಾರ್ಥಿಗಳು ಅಲ್ಲಿಗೆ MBBS ಕಲಿಯಲು ಹೋಗುತ್ತಿದ್ದಾರೆ, ನಮ್ಮಲ್ಲಿ ಖರ್ಚು ಜಾಸ್ತಿ ಅಂತಾ ಉಕ್ರೇನ್ಗೆ ಹೋಗಿ ಕಲಿಯುತ್ತಿದ್ದಾರೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಒಂದು ಖಾಸಗಿ ಸಂಸ್ಥೆಯಾಗಿದ್ದು, MCI ಸೀಟ್ ಅಭಾವ ಸೃಷ್ಟಿ ಮಾಡ್ತಿರೋದೇ ಇದಕ್ಕೆಲ್ಲಾ ಕಾರಣವಾಗುತ್ತಿದೆ. ಎಂಸಿಐ ಮೇಲೆ ಕ್ರಮ ಕೈಗೊಂಡರೆ ಇಲ್ಲಿ ಅರ್ಹರಿಗೆ ಲಾಭ ಆಗಲಿದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.