ಜಗತ್ತಿನಾದ್ಯಂತ ಇರುವ ಬಹಳಷ್ಟು ಪಜಲ್ ಪ್ರೇಮಿಗಳಿಗೆ ಸೂಡೊಕು ಅಂದರೆ ಅಚ್ಚುಮೆಚ್ಚು. ಅಂಕಿ ಸಂಖ್ಯೆಗಳೊಂದಿಗೆ ಆ ಒಗಟಿಗೆ ಮಾರುಹೋಗದವರಿಲ್ಲ. ಇಂತಹ ಪಜಲ್ ಅನ್ನು ಜನಪ್ರಿಯವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ‘ಫಾದರ್ ಆಫ್ ಸೂಡೊಕು’ ಎಂದೇ ಖ್ಯಾತಿ ಗಳಿಸಿದ್ದ ಜಪಾನ್ ನ ಮಕಿ ಕಾಜಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.
ಆಗಸ್ಟ್ 10 ರಂದು ಮಕಿ ಕಾಜಿ (69) ಅವರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ ಎಂದು ಜಪಾನ್ ನ ಪಜಲ್ ನಿಯತಕಾಲಿಕ ನಿಕೋಲಿ (Nikoli) ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
18 ನೇ ಶತಮಾನದಲ್ಲಿ ಸ್ವಿಜರ್ಲೆಂಡ್ ನ ಗಣಿತಜ್ಱ ಲಿಯೊನ್ಹಾರ್ಡ್ ಯೂಲರ್ ಅಂಕಿ ಸಂಖ್ಯೆಗಳ ಕ್ರಾಸ್ ವರ್ಡ್ ಅನ್ನು ಕಂಡು ಹಿಡಿದರು. ಆ ಬಳಿಕ ಅಮೆರಿಕದಲ್ಲಿ ಇದರ ಸುಧಾರಿತ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಸೂಡೊಕು ಪಜಲ್ ನಲ್ಲಿ ದೊಡ್ಡ ಚೌಕದೊಳಗೆ 81 ಬಾಕ್ಸ್ ಗಳಿರುತ್ತವೆ. ಇದರಲ್ಲಿ 9 ಚಿಕ್ಕ ಬಾಕ್ಸ್ ಗಳಿದ್ದು, ಪ್ರತಿಯೊಂದು ಬಾಕ್ಸ್ ನಲ್ಲೂ 1 ರಿಂದ 9 ರವರೆಗೆ ಅಂಕಿಗಳನ್ನು ಬರೆಯಬೇಕು. ಯಾವುದೇ ಅಂಕಿಗಳು ಮರುಕಳಿಸದಂತೆ ಸಮಸ್ಯೆಯನ್ನು ಬಿಡಿಸಬೇಕಿರುತ್ತದೆ.
1951 ರಲ್ಲಿ ಜಪಾನಿನಲ್ಲಿ ಜನಿಸಿದ ಕಾಜಿ ಅವರು ಆಗಸ್ಟ್ 1980 ರಲ್ಲಿ ನಿಕೋಲಿ (Nikoli) ಎಂಬ ಪಜಲ್ ನಿಯತಕಾಲಿಕವನ್ನು ಆರಂಭಿಸಿದರು. 1984 ರಲ್ಲಿ ಕಾಜಿ ಅವರು ಸೂಡೊಕುವನ್ನು ಗುರುತಿಸಿ ಅದನ್ನು ತಮ್ಮ ನಿಯತಕಾಲಿಕದಲ್ಲಿ ಮೊದಲ ಬಾರಿಗೆ ಪ್ರಕಟಿಸಿದ್ದರು. ಅವರೇ ಈ ಪಜಲ್ ಗೆ ಸುಡೊಕು ಎಂದು ಹೆಸರನ್ನೂ ಸಹ ಇಟ್ಟಿದ್ದರು. ಜೊತೆಗೆ ಅವರು ಈ ಪಜಲ್ ಅನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದರು.
ಸೂಡೊಕು ಗೆ ಮೊದಲಿದ್ದ ಹೆಸರು ಅಷ್ಟು ಹಿಡಿಸಲಿಲ್ಲ. ಹಾಗಾಗಿ ಹೊಸ ಹೆಸರು ಸೂಚಿಸುವಂತೆ ನನ್ನ ಸಹೋದ್ಯೋಗಿಗಳಿಗೆ ಸೂಚಿಸಿದೆ. ಅವರು ಸುಡೊಕು (Sudoku) ಹೆಸರನ್ನು ಸೂಚಿಸಿದರು. ಈ ಪಜಲ್ ಜಪಾನ್ ನಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಆದರೆ 2004 ರಲ್ಲಿ The Times of London ಈ ಪಜಲ್ ಅನ್ನು ಪ್ರಕಟಿಸಿದ ಬಳಿಕ ಪ್ರಪಂಚದಾದ್ಯಂತ ಜನಪ್ರಿಯವಾಯಿತು. ಕಾಜಿ ಈ ಪಜಲ್ ಗೆ ಯಾವುದೇ ಟ್ರೇಡ್ ಮಾರ್ಕ್ ಪಡೆದುಕೊಂಡಿರಲಿಲ್ಲ ಮತ್ತು ಇದರಿಂದ ಆದಾಯವನ್ನೂ ಗಳಿಸಲಿಲ್ಲ. ಇದರ ಮೂಲಕ ಹಣ ಗಳಿಸುವುದ್ದಕ್ಕಿಂತ ಜನರು ಈ ಪಜಲ್ ಅನ್ನು ಬಿಡಿಸುವಾಗ ಸಂತಸ ಪಡುವುದು ಹೆಚ್ಚು ಮುಖ್ಯವಾದುದು. ಹೊಸ ಸೂಡೊಕು ಪಜಲ್ ಗಳನ್ನು ಸೃಷ್ಟಿಸುವುದು ನನಗೆ ನಿಧಿಯನ್ನು ಹುಡುಕಿದಷ್ಟೇ ಖುಷಿ ಕೊಡುತ್ತದೆ ಎಂದು ಕಾಜಿ ತಿಳಿಸಿದ್ದರು.