ನವದೆಹಲಿ: ಅಗ್ನಿಪಥ್ ಯೋಜನೆ (Agnipath scheme)ಯ ಮೂಲಕವೇ ಸೈನಿಕರ ನೇಮಕಾತಿ ನಡೆಯಲಿದೆ, ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಸ್ಪಷ್ಟಪಡಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನೇತೃತ್ವದಲ್ಲಿ ಇಂದು ಮೂರೂ ಸೇನೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಲೆಪ್ಟಿನೆಂಟ್ ಜನರಲ್ ಅನಿಲ್ ಪುರಿ ‘ಅಗ್ನಿವೀರರು ಮತ್ತು ಸೇನೆಯಲ್ಲಿರುವ ಇತರೆ ಸೈನಿಕರ ನಡುವೆ ಯಾವುದೇ ತಾರತಮ್ಯ ಇರುವುದಿಲ್ಲ. ಕರ್ತವ್ಯದ ವೇಳೆ ಹುತಾತ್ಮರಾದರೆ ಅಗ್ನಿವೀರರ ಕುಟುಂಬಸ್ಥರಿಗೆ 1 ಕೋಟಿ ರೂ. ಪರಿಹಾರ ದೊರೆಯಲಿದೆ. ಜೊತೆಗೆ ಸಿಯಾಚಿನ್ ಮತ್ತು ಇತರೆ ದುರ್ಗಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅಗತ್ಯ ಭತ್ಯೆಗಳನ್ನೂ ಒದಗಿಸಲಾಗುವುದು. ಗಲಭೆಕೋರರಿಗೆ ಸೇನೆಯಲ್ಲಿ ಅವಕಾಶ ಇಲ್ಲವೇ ಇಲ್ಲ’ ಎಂದು ತಿಳಿಸಿದ್ಧಾರೆ.
“ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಜೂನ್ 14 ಘೋಷಿಸಲಾಗಿದೆ. ಆದರೆ ಸುಧಾರಣೆಯು ದೀರ್ಘಾವಧಿಯಿಂದ ಬಾಕಿ ಉಳಿದಿತ್ತು. ಇಂದು, ಹೆಚ್ಚಿನ ಸಂಖ್ಯೆಯ ಯೋಧರು 30 ರ ವಯಸ್ಸಿನ ಆಸುಪಾಸಿನಲ್ಲಿದ್ದಾರೆ ಮತ್ತು ಅಧಿಕಾರಿಗಳು ಹಿಂದೆಂದಿಗಿಂತಲೂ ತಡವಾಗಿ ಕಮಾಂಡ್ ಪಡೆಯುತ್ತಿದ್ದಾರೆ. ಯುದ್ಧಗಳು ಭವಿಷ್ಯದಲ್ಲಿ ತಂತ್ರಜ್ಞಾನ ಆಧರಿಸಿರುತ್ತವೆ. ಹಾಗಾಗಿ ತಾಂತ್ರಿಕವಾಗಿ ಬಲಿಷ್ಠರಾಗಿರುವ ಯುವಕರು ನಮಗೆ ಬೇಕು ಎಂದು ಪುರಿ ತಿಳಿಸಿದ್ಧಾರೆ.
“ಪ್ರತಿ ವರ್ಷ ಸುಮಾರು 17,600 ಜನರು ಮೂರು ಸೇವೆಗಳಿಂದ ಅಕಾಲಿಕ ನಿವೃತ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ನಿವೃತ್ತಿಯ ನಂತರ ಅವರು ಏನು ಮಾಡುತ್ತಾರೆ ಎಂದು ಯಾರೂ ಕೇಳಲು ಪ್ರಯತ್ನಿಸಲಿಲ್ಲ. ನಾವು ಇದನ್ನು ಬಹಳ ಸಮಯದಿಂದ ಅಧ್ಯಯನ ಮಾಡುತ್ತಿದ್ದೆವು. ಆದರೆ ಅದನ್ನು ಕಾರ್ಯಗತಗೊಳಿಸಲು ಸಮಯ ಸಿಗಲಿಲ್ಲ. ಮುಂದಿನ 4-5 ವರ್ಷಗಳಲ್ಲಿ, ಸೇನೆಗೆ 50,000-60,000 ಯೋಧರನ್ನು ನೇಮಕ ಮಾಡಿಕೊಳ್ಳಲಾಗುವುದು. ಬಳಿಕ ಇದನ್ನು90,000 – 1 ಲಕ್ಷಕ್ಕೆ ಹೆಚ್ಚಿಸಲಾಗುವುದು. ಪ್ರಸ್ತುತ ಅಗ್ನಿಪಥ ಯೋಜನೆಯನ್ನು ವಿಶ್ಲೇಷಿಸಲು 46,000 ಯೋಧರನ್ನು ಈ ಯೋಜನೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸೇನೆಯಿಂದ ಹೊರಬರುವ ಅಗ್ನಿವೀರರು (Agniveers) ಕೌಶಲ್ಯಯುತ ಮತ್ತು ಶಿಸ್ತುಬದ್ಧರಾಗುತ್ತಾರೆ ಎಂದು ಪುರಿ ತಿಳಿಸಿದ್ಧಾರೆ.