ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ 40% ಕಮಿಷನ್ ವಿಚಾರ ಈಗ ಮತ್ತೆ ಸುದ್ದಿ ಕೇಂದ್ರ ಕ್ಕೆ ಬಂದಿದ್ದು, 40% ಕಮಿಷನ್ ವಿಚಾರವಾಗಿ ನಾಳೆ ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಷಿಯೇಷನ್ ಸುದ್ದಿಗೋಷ್ಠಿ ನಡೆಸಲಿದ್ದು, ಮತ್ತಷ್ಟು ಕರ್ಮಕಾಂಡವನ್ನು ಬಯಲಿಗೆಳೆಯಲು ಸಿದ್ಧವಾಗಿದೆ.
ರಾಜ್ಯದಲ್ಲಿನ 40% ಕಮಿಷನ್ ಕರ್ಮಕಾಂಡದ ವಿಷಯವಾಗಿ ಕಾಂಟ್ರಾಕ್ಟರ್ ಗಳ ಅಸೋಸಿಯೇಷನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು. ಕಮಿಷನ್ ದಂಧೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜೊತೆಗೆ ಅವರಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ. ಗುತ್ತಿಗೆದಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಲ್ಲ. ಪ್ರಧಾನಿ ಗೆ ಪತ್ರ ಬರೆದಿರುವ ವಿಷಯ ಬಹಿರಂಗವಾಗುತ್ತಿದ್ದಂತೆ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ವಿಷಯದ ಕುರಿತು ವಿಪಕ್ಷ ನಾಯಕರು ಮತ್ತು ಆಡಳಿತ ಪಕ್ಷದ ನಾಯಕರ ನಡುವೆ ವಾಗ್ಯುದ್ದ ನಡೆದಿತ್ತು.
ಇದನ್ನೂ ಓದಿ: 3 ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅಧಿವೇಶನ… ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಸಿದ್ಧವಾದ ಕುಂದಾನಗರಿ…
ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಆರಂಭವಾಗಲಿದ್ದು, ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ವಿಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದರ ಬೆನ್ನಲ್ಲೇ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ನಾಳೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಹಮ್ಮಿಕೊಂಡಿದೆ.
ಇದನ್ನೂ ಓದಿ: ಬಿಪಿನ್ ರಾವತ್ ವಿರುದ್ಧ ಅವಹೇಳನಕಾರಿ ಪೋಸ್ಟ್… ವಿಧಾನಸೌಧ ಪೊಲೀಸರಿಂದ ಪೋಸ್ಟ್ ಹಾಕಿದ್ದ ವ್ಯಕ್ತಿ ಅರೆಸ್ಟ್…
ಸುದ್ದಿಗೋಷ್ಠಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಸರಕಾರದ ಮೇಲೆ ಒತ್ತಡ ಹೇರಲು ಹಮ್ಮಿಕೊಂಡಿರುವ ಹೋರಾಟ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರಿಗೆ ನೀಡಿರುವ ದೂರು, ಕಳಪೆ ಕಾಮಗಾರಿಗಳಿಗೆ ಕಾರಣವಾಗುವ ಅಂಶಗಳು ಮತ್ತಿತರ ವಿಷಯಗಳನ್ನು ಹಂಚಿಕೊಳ್ಳಲು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ನಿರ್ಧರಿಸಿದೆ ಎಂದು ಅಸೋಸಿಯೇಷನ್ ನ ಅಧ್ಯಕ್ಷರಾದ ಡಿ. ಕೆಂಪಣ್ಣ ತಿಳಿಸಿದ್ದಾರೆ.