ಬೆಂಗಳೂರು : ಕನ್ನಡ ಸಿನಿಮಾಗಳು ಕರ್ನಾಟಕದ ಗಡಿ ದಾಟಿ ದಾಖಲೆ ಬರೆಯೋಕೆ ಶುರುಮಾಡಿ ಬಹಳ ದಿನಗಳಾಯ್ತು. ಹಾಲಿವುಡ್ ಮಂದಿ ಕೂಡ ತಿರುಗಿ ನೋಡುವಂತ ಪ್ಯಾನ್ ಇಂಡಿಯಾ ಸಿನಿಮಾಗಳು ಈಗ ಸ್ಯಾಂಡಲ್ವುಡ್ನಲ್ಲಿ ನಿರ್ಮಾಣವಾಗ್ತಿದೆ. ಸೆಂಚುರಿ ಸ್ಟಾರ್ ಈಗ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈ ಹಾಕಿದ್ದಾರೆ.
ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ನಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕೂಡ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಇದು ನೈಜ ಘಟನೆ ಆಧರಿತ ಕ್ರೈಂ ಥ್ರಿಲ್ಲರ್ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಯೂನಿವರ್ಸಲ್ ಸಬ್ಜೆಕ್ಟ್ ಆಗಿರೋದ್ರಿಂದ ಭಾರೀ ಬಜೆಟ್ನಲ್ಲಿ ದೊಡ್ಡ ಕ್ಯಾನ್ವಾಸ್ನಲ್ಲಿ ಈ ಸಿನಿಮಾ ಕಟ್ಟಿಕೊಡೋ ಪ್ರಯತ್ನ ನಡೀತಿದೆ.
ಬೈರಾಗಿ, ನೀ ಸಿಗೋವರೆಗೂ, ವೇದ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಶಿವಣ್ಣ, ಹೊಸ ಕಥೆ ಕೇಳಿ ಥ್ರಿಲ್ಲಾಗಿದ್ದಾರೆ. ಈ ಚಿತ್ರವನ್ನ ಕನ್ನಡ ಮಾತ್ರವಲ್ಲದೇ 5 ಭಾಷೆಗಳಲ್ಲಿ ಕಟ್ಟಿಕೊಡೋಣ ಅಂದಾಗ ಸೈ ಅಂದಿದ್ದಾರೆ. 50 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಸಂಚಲನ ಸೃಷ್ಟಿಸಿದ್ದ ಭೂಗತಲೋಕದ ಕಥೆ ಇದಾಗಿದ್ದು, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಬುದ್ಧಿವಂತ- 2’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿರೋ ಆರ್ ಜೈ ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾ ಸಾರಥ್ಯ ವಹಿಸಿಕೊಂಡಿದ್ದಾರೆ.
ಭೂಗತಲೋಕದ ಸಿನಿಮಾಗಳು ಶಿವಣ್ಣನಿಗೆ ಹೊಸದೇನು ಅಲ್ಲ. ಶಿವಣ್ಣ ಲಾಂಗ್ ಹಿಡಿದ್ರೆ, ಬಾಕ್ಸಾಫೀಸ್ ಶೇಕ್ ಆಗುತ್ತೆ ಅನ್ನೋದು ಸಾಕಷ್ಟು ಸಲ ಪ್ರೂವ್ ಆಗಿದೆ. ಈ ಬಾರಿ ರೆಟ್ರೋ ಸ್ಟೈಲ್ ಅಂಡರ್ವರ್ಲ್ಡ್ ಕಥೆಯಲ್ಲಿ ಶಿವಣ್ಣ ಅಬ್ಬರಿಸೋಕೆ ಬರ್ತಿದ್ದು, 90ರ ದಶಕದಲ್ಲಿ ಉಪೇಂದ್ರ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಓಂ ಸಿನಿಮಾ ಹೊಸ ಸಂಚಲನ ಸೃಷ್ಟಿಸಿತ್ತು. ಅಂದಿನ ಬೆಂಗಳೂರು ಭೂಗತಲೋಕದ ಟಚ್ ಕೊಟ್ಟು ಈ ಸಿನಿಮಾ ಕಟ್ಟಿಕೊಟ್ಟು ಉಪ್ಪಿ ಗೆದ್ದಿದರು, ಓಂ ಸತ್ಯನನ್ನು ಕನ್ನಡ ಸಿನಿರಸಿಕರು ಎಂದಿಗೂ ಮರೆಯೋದಿಲ್ಲ.
ಲಕ ಲಕ ಲ್ಯಾಂಬೋರ್ಗಿನಿ ಆಲ್ಬಮ್ ಸಾಂಗ್ ನಿರ್ಮಿಸಿದ ಆರ್. ಕೇಶವ್ ಈ ಚಿತ್ರಕ್ಕೆ ಬಂಡವಾಳ ಹಾಕೋಕೆ ಮುಂದೆ ಬಂದಿದ್ದಾರೆ. ಫೆಬ್ರವರಿಯಲ್ಲಿ ಅದ್ದೂರಿಯಾಗಿ ಮುಹೂರ್ತ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ಕೊಡೋ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಟೈಟಲ್ ಕೂಡ ಶೀಘ್ರದಲ್ಲೇ ಅನೌನ್ಸ್ ಆಗಲಿದ್ದು, ದಶಕಗಳ ಹಿಂದಿನ ಭೂಗತಲೋಕದ ಕಥೆ ಅಂದಾಕ್ಷಣ ಅಭಿಮಾನಿಗಳಿಗೆ ಓಂ ಸತ್ಯ ನೆನಪಾಗ್ತಿದ್ದಾನೆ. ಹೇಳಿಕೇಳಿ ಇದು ಪ್ಯಾನ್ ಇಂಡಿಯಾ ಸಿನಿಮಾ. 70ರ ದಶಕದ ಕಾಲಘಟ್ಟದಲ್ಲಿ ಅದು ಕೂಡ ಶಿವಮೊಗ್ಗದಲ್ಲಿ ನಡೆಯೋ ಕಥೆ. ಹಾಗಾಗಿ ಶಿವಣ್ಣನ ಲುಕ್, ಗೆಟಪ್, ಕ್ಯಾರೆಕ್ಟರೈಷನ್ ಹೇಗಿರುತ್ತೋ ಅನ್ನೋ ಕುತೂಹಲ ಮೂಡಿದೆ.
ಇದನ್ನೂ ಓದಿ: ಬರ್ಬಾದ್ ಆದ ಪಾಕಿಸ್ತಾನ…! ರಸ್ತೆಗಳನ್ನು ಅಡವಿಟ್ಟು ಸಾಲ ಪಡೆದ ಇಮ್ರಾನ್ ಸರ್ಕಾರ…!