ಇತ್ತೀಚಿನ ಕೆಲವು ವರ್ಷಗಳಲ್ಲಿ ಅಫ್ಘಾನಿಸ್ತಾನ ತಂಡ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ್ದು, ಪ್ರಬಲ ತಂಡಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನಿಗಳು ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಆಫ್ಘನ್ ಕ್ರಿಕೆಟ್ ತಂಡದ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಎದ್ದಿದೆ.
ಅದರಲ್ಲೂ ಸ್ವತಃ ಆಫ್ಘನ್ ಕ್ರಿಕೆಟ್ ತಂಡದ ಆಟಗಾರರಿಗೆ ತಮ್ಮ ಭವಿಷ್ಯದ ಕುರಿತು ಚಿಂತಿಸುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ದುಬೈನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲಿದೆ. ಮಹತ್ವದ ಟೂರ್ನಿಗಾಗಿ ನಾವು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮೀಡಿಯಾ ಮ್ಯಾನೇಜರ್ ಹಿಕ್ಮತ್ ಹಸನ್ ಅವರು ’ನಾವು ಟಿ20 ವಿಶ್ವಕಪ್ ನಲ್ಲಿ ಆಡುತ್ತೇವೆ. ಮುಂದಿನ ಕೆಲವು ದಿನಗಳಲ್ಲಿ ತಂಡದ ಆಟಗಾರರು ಕಾಬೂಲ್ ನಲ್ಲಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾವು ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನೊಳಗೊಂಡ ಸರಣಿಯನ್ನು ಆಯೋಜಿಸಲು ಸ್ಥಳ ಹುಡುಕುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಮತ್ತು ಮಲೇಷ್ಯಾ ಕ್ರಿಕೆಟ್ ಮಂಡಳಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಜೊತೆಗೆ ಶ್ರೀಲಂಕಾದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸರಣಿಯನ್ನು ಆಡಲಿದೆ. ಇದೇ ವೇಳೆ ದೇಶೀಯ ಟಿ20 ಟೂರ್ನಿಯನ್ನು ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಮೂಲಕ ತಂಡದ ಆಟಗಾರರು ಟಿ20 ವಿಶ್ವಕಪ್ ಗೆ ಸಿದ್ಧತೆ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ಧಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತಂಡದ ಆಟಗಾರರು ಮತ್ತು ಅವರ ಕುಟುಂಬಸ್ಥರಿಗೆ ನೆರವು ನೀಡಲು ಸದಾ ಸಿದ್ಧವಿದೆ. ಕಾಬೂಲ್ ನಲ್ಲಿ ಪರಿಸ್ಥಿತಿ ಅಷ್ಟಾಗಿ ಬಿಗಡಾಯಿಸಿಲ್ಲ. ನಾವು ಕಚೇರಿಗೆ ತೆರಳಿದ್ದು, ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಹಸನ್ ತಿಳಿಸಿದ್ಧಾರೆ.
ಇನ್ನು ಟಿ20 ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ತಂಡ ಗ್ರೂಪ್ 2 ನಲ್ಲಿ ಸ್ಥಾನ ಪಡೆದಿದ್ದು, ಈ ಗ್ರೂಪ್ ನಲ್ಲಿ ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳೂ ಸಹ ಸ್ಥಾನ ಪಡೆದಿವೆ. ಗ್ರೂಪ್ 1 ರಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.
ಸೂಪರ್ 12 ಹಂತ ಆರಂಭಕ್ಕೂ ಮುನ್ನ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿದ್ದು, ಕ್ವಾಲಿಫೈಯರ್ ಸುತ್ತಿಗಾಗಿ 2 ಗುಂಪುಗಳನ್ನು ರಚಿಸಲಾಗಿದ್ದು, ಗ್ರೂಪ್ ಎ ನಲ್ಲಿ ಐರ್ಲೆಂಡ್, ನೆದರ್ಲೆಂಡ್ಸ್, ನಮೀಬಿಯಾ ಮತ್ತು ಶ್ರೀಲಂಕಾ ತಂಡಗಳಿವೆ, ಗ್ರೂಪ್ ಬಿ ನಲ್ಲಿ ಒಮೆನ್, ಪಪುವಾ ನ್ಯೂ ಗಿನಿಯಾ, ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳಿವೆ.