ಲಂಡನ್: ಬ್ರಿಟನ್ (ಯುನೈಟೆಡ್ ಕಿಂಗ್ ಡಮ್) ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ವಿವಾದದ ಸುಳಿಗೆ ಸಿಲುಕಿಕೊಂಡಿದ್ದು, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಚಾನ್ಸಲರ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಪ್ರಧಾನಿ ಹುದ್ದೆಗೇರುವ ಸಾಧ್ಯತೆ ಇದೆ ಎಂದು ವರದಿಯಾಗುತ್ತಿದೆ.
2020ರ ಮೇ ತಿಂಗಳಿನಲ್ಲಿ ಕೊರೋನಾ ಮೊದಲನೇ ಅಲೆಯ ವೇಳೆ ಪ್ರಧಾನಿಯ ಅಧಿಕೃತ ನಿವಾಸ ಇರುವ ಡೌನಿಂಗ್ ಸ್ಟ್ರೀಟ್ ನಲ್ಲಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಪಾರ್ಟಿ ಮಾಡಿದ್ದರು. ಈ ಮೂಲಕ ಕೊರೋನಾ ಲಾಕ್ ಸೌನ್ ನ ನಿಯಮಗಳನ್ನು ಮುರಿದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಜೊತೆ ಜೊತೆಯಲ್ಲೇ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಮುಖಂಡರಿಂದಲೂ ಬೋರಿಸ್ ಜಾನ್ಸನ್ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ.
ಇದನ್ನೂ ಓದಿ: ಕೋಲಾರದಲ್ಲಿ ಕನ್ನಡ ಪ್ರೀತಿ ಮೆರೆದ ಆಂಧ್ರದ ಮಕ್ಕಳು… ಕನ್ನಡ ಮಾಧ್ಯಮ ಶಾಲೆಗೆ ಸೇರಿದ ಆಂಧ್ರದ 11 ಮಕ್ಕಳು…
ಇದೇ ವೇಳೆ ಬೋರಿಸ್ ಜಾನ್ಸನ್ ಅವರು ಬುಧವಾರ ಹೌಸ್ ಆಫ್ ಕಾಮನ್ಸ್ ನಲ್ಲಿ ಘಟನೆ ಕುರಿತು ಕ್ಷಮೆ ಕೇಳಿದ್ದಾರೆ. ಅವರು ‘ನಾನು ಕ್ಷಮೆಯಾಚಿಸುತ್ತಿದ್ದೇನೆ. ಕಳೆದ 18 ತಿಂಗಳಲ್ಲಿ ಹಲವು ಮಿಲಿಯನ್ ಜನರು ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ. ಪ್ರಧಾನಿ ಕಚೇರಿಯೇ ಕೊರೋನಾ ನಿಯಮಗಳನ್ನು ಮುರಿದಿರುವ ಹಿನ್ನೆಲೆಯಲ್ಲಿ ನನ್ನ ಮೇಲೆ ಮತ್ತು ನನ್ನ ಸರ್ಕಾರದ ಮೇಲೆ ಅವರಿಗೆ ಕೋಪ ಬಂದಿದೆ ಎಂಬುದು ತಿಳಿದಿದೆ’ ಎಂದು ತಿಳಿಸಿದ್ದರು.
ಈ ಘಟನೆ ಕುರಿತು ಹಿರಿಯ ಅಧಿಕಾರಿ ಸ್ಯೂ ಗ್ರೇ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಇವರು ಪ್ರಧಾನಿ ಕಚೇರಿ ಮತ್ತು ನಿವಾಸ ಇರುವ ಸೌನಿಂಗ್ ಸ್ಟ್ರೀಟ್ ಸೇರಿದಂತೆ ಸರ್ಕಾರಿ ಕ್ವಾರ್ಟರ್ಸ್ ಗಳಲ್ಲಿ ಲಾಕ್ ಡೌನ್ ನಿಯಮಗಳ ಉಲ್ಲಂಘನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖಾ ವರದಿಯ ಮೇಲೆ ಬೋರಿಸ್ ಜಾನ್ಸನ್ ಭವಿಷ್ಯ ನಿರ್ಧಾರಿತವಾಗಲಿದೆ.