ಕೊರೊನಾ ಹಿನ್ನೆಲೆಯಲ್ಲಿ ಭಾರತದಿಂದ ಯುಎಇ ಗೆ ಶಿಫ್ಟ್ ಅಗಿರುವ ಟಿ20 ವರ್ಲ್ಡ್ ಕಪ್ ನ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲು ದಿನಾಂಕ ನಿಗದಿಯಾಗಿದೆ.
ಟಿ20 ವರ್ಲ್ಡ್ ಕಪ್ 2021 ಯುಎಇ ಮತ್ತು ಒಮನ್ ನಲ್ಲಿ ನಡೆಯಲಿದ್ದು, ಅಕ್ಟೋಬರ್ 17 ರಿಂದ ಟೂರ್ನಿ ಆರಂಭವಾಗಲಿದ್ದು, ಫೈನಲ್ ಪಂದ್ಯ ನವೆಂಬರ್ 14 ರಂದು ನಡೆಯಲಿದೆ. ಟೂರ್ನಿಯ ಆರಂಭದಲ್ಲಿ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ. ಕ್ವಾಲಿಫೈಯರ್ ಸುತ್ತಿಗಾಗಿ 2 ಗುಂಪುಗಳನ್ನು ರಚಿಸಲಾಗಿದ್ದು, ಗ್ರೂಪ್ ಎ ನಲ್ಲಿ ಐರ್ಲೆಂಡ್, ನೆದರ್ಲೆಂಡ್ಸ್, ನಮೀಬಿಯಾ ಮತ್ತು ಶ್ರೀಲಂಕಾ ತಂಡಗಳಿವೆ, ಗ್ರೂಪ್ ಬಿ ನಲ್ಲಿ ಒಮೆನ್, ಪಪುವಾ ನ್ಯೂ ಗಿನಿಯಾ, ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳಿವೆ. ಟೂರ್ನಿಯ ಮೊದಲ ಪಂದ್ಯ ಒಮನ್ ಮತ್ತು ಪಪುವಾ ನ್ಯೂ ಗಿನಿಯಾ ನಡುವೆ ನಡೆಯಲಿದೆ. ಅಕ್ಟೋಬರ್ 22 ರವರೆಗೆ ಕ್ವಾಲಿಫೈಯರ್ ಹಂತದ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 23 ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿವೆ.
Mark your calendars 📆
Get ready for the 2021 ICC Men’s #T20WorldCup bonanza 🤩
— ICC (@ICC) August 17, 2021
ಅಕ್ಟೋಬರ್ 23 ರಂದು ಗ್ರೂಪ್ 1 ರಲ್ಲಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸೂಪರ್ 12 ಹಂತದ ಮೊದಲ ಪಂದ್ಯ ನಡೆಯಲಿದೆ. ಇನ್ನು ಗ್ರೂಪ್ 2 ನಲ್ಲಿರುವ ಭಾರತ ಮತ್ತು ಪಾಕಿಸ್ತಾನ ನಡುವೆ ಅಕ್ಟೋಬರ್ 24 ರಂದು ದುಬೈನಲ್ಲಿ ಪಂದ್ಯ ನಡೆಯಲಿದೆ. ಬಳಿಕ ಅಕ್ಟೋಬರ್ 31 ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯಲಿದೆ ಹಾಗೂ ನವೆಂಬರ್ 3 ರಂದು ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಎದುರಾಗಲಿವೆ. ಬಳಿಕ ನವೆಂಬರ್ 5 ರಂದು ಭಾರತ ಮತ್ತು ಕ್ವಾಲಿಫೈಯರ್ ಹಂತದ ಗ್ರೂಪ್ ಬಿ ನ ವಿಜಯೀ ತಂಡದ ವಿರುದ್ಧ ಪಂದ್ಯವನ್ನಾಡಲಿದೆ. ನವೆಂಬರ್ 8 ರಂದು ಟೀಂ ಇಂಡಿಯಾ ಕ್ವಾಲಿಫೈಯರ್ ಹಂತದ ಗ್ರೂಪ್ ಎ ನ ರನ್ನರ್ ಅಪ್ ತಂಡದ ವಿರುದ್ಧ ಪಂದ್ಯವನ್ನಾಡಲಿದೆ.
ಮೊದಲ ಸೆಮಿಫೈನಲ್ ಪಂದ್ಯ ನವೆಂಬರ್ 10 ರಂದು ಅಬುಧಾಬಿಯಲ್ಲಿ ನಡೆಯಲಿದ್ದರೆ, ಎರಡನೇ ಸೆಮಿಫೈನಲ್ ಪಂದ್ಯ ನವೆಂಬರ್ 11 ರಂದು ದುಬೈ ನಲ್ಲಿ ನಡೆಯಲಿದೆ. ನವೆಂಬರ್ 14 ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್ ಪಂದ್ಯಕ್ಕೆ ರಿಸರ್ವ್ ಡೇಯನ್ನೂ ನಿಗದಿಪಡಿಸಲಾಗಿದೆ.