ಭಾರತ ತಂಡ ಇಂಗ್ಲೆಂಡ್ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಮುನ್ನಡೆ ಪಡೆದಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಸಿಡಿಸಿದ ಶತಕ ಹಾಗೂ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ನೆರವಿನಿಂದ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ.
ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ರಿಷಭ್ ಪಂತ್ ಅವರ ಅಮೋಘ ಶತಕದ ನೆರವಿನಿಂದ ಟೀಮ್ ಇಂಡಿಯಾ ದಿನಾಂತ್ಯಕ್ಕೆ ಮೊದಲ ಇನಿಂಗ್ಸ್ನಲ್ಲಿ 7 ವಿಕೆಟ್ ನಷ್ಟದಲ್ಲಿ 267 ರನ್ ಗಳಿಸಿದೆ. ಅಹಮದಾಬಾದ್ನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಶುಕ್ರವಾರ ಕೊನೆಗೊಂಡಿದ್ದು, 71 ರನ್ ಗಳ ಮುನ್ನಡೆ ಗಳಿಸಿದೆ. ಒಂದು ಹಂತದಲ್ಲಿ 146 ರನ್ಗಳಿಸಿ 6 ವಿಕೆಟ್ ಕಳೆದುಕೊಂಡು ಹಿನ್ನಡೆಯ ಭೀತಿಗೆ ಸಿಲುಕಿದ್ದ ಭಾರತ ತಂಡಕ್ಕೆ ರಿಷಭ್ ಪಂತ್ ಹಾಗೂ ವಾಷಿಂಗ್ಟನ್ ಸುಂದರ್ ಜೊತೆಯಾಟದಿಂದ ತಂಡಕ್ಕೆ ಮೇಲುಗೈ ತಂದುಕೊಟ್ಟರು.
ರಿಷಭ್ ಪಂತ್ 118 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದ ಬೆನ್ನಲ್ಲೇ ನಿರ್ಗಮಿಸಿದರು. ಇದಕ್ಕೂ ಮುನ್ನ 7ನೇ ವಿಕೆಟ್ಗೆ ಸುಂದರ್ ಜೊತೆ ರಿಷಭ್ ಪಂತ್ 113 ರನ್ಗಳ ಜೊತೆಯಾಟವಾಡಿದ್ದಾರೆ. ಸುಂದರ್ 99 ಎಸೆತಗಳಲ್ಲಿ 8 ಬೌಂಡರಿ ಒಳಗೊಂಡ 55 ರನ್ ಬಾರಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಜೇಮ್ಸ್ ಆಯಂಡರ್ಸನ್ 3, ಸ್ಟೋಕ್ಸ್ ಮತ್ತು ಲೀಚ್ ತಲಾ 2 ವಿಕೆಟ್ ಪಡೆದಿದ್ದಾರೆ.