ಚಿಕ್ಕೋಡಿ: ಕೃಷ್ಣಾ ನದಿತೀರದಲ್ಲಿ ರಾಜಾರೋಷವಾಗಿ ಅಕ್ರಮ ಮಣ್ಣು ದಂಧೆ ನಡೆಯುತ್ತಿದ್ದರೂ ಕಾಗವಾಡ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳವಾಡ ಗ್ರಾಮದಲ್ಲಿ ಹಾಯ್ದು ಹೋಗಿರುವ ಕೃಷ್ಣಾ ನದಿ ದಡದಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ರಾಜಾರೋಷವಾಗಿ ಹಗಲು ಹೊತ್ತಿನಲ್ಲಿಯೇ ನದಿ ಪಕ್ಕದ ಮಣ್ಣನ್ನು ದಂಧೆಕೋರರು ತೆಗೆದುಕೊಂಡು ಹೋಗುತ್ತಿದ್ದರೂ ಅಧಿಕಾರಿಗಳು ಮಾತ್ರ ನಿದ್ರೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಭಿಕ್ಷಾಟನೆ… ರಾಯಬಾಗದಲ್ಲಿ ಪೊಲೀಸರನ್ನ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು…
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಾಗವಾಡ ತಾಲೂಕಿನ ಕೃಷ್ಣಾ ನದಿಯ ದಡದಲ್ಲಿ ಬರುವ ಮೊಳವಾಡ, ಕುಸುನಾಳ ಸೇರಿದಂತೆ ಇತರೆ ಗ್ರಾಮಗಳಲ್ಲೂ ಫಲವತ್ತಾದ ಮಣ್ಣನ್ನು ಇಟ್ಟಿಗೆ ತಯಾರಿಕೆ ಸೇರಿದಂತೆ ಇತರ ವೈಯಕ್ತಿಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಆರೋಪವಿದೆ.
ಆದರೆ ಕೃಷ್ಣಾ ನದಿಯ ಒಡಲನ್ನು ಅಗೆಯುತ್ತಿರುವ ಖದೀಮರ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಕ್ರಮವಾಗಿ ನದಿಯ ಒಡಲಲ್ಲಿನ ಮಣ್ಣನ್ನ ಅಗೆದು ಮಾರಾಟ ಮಾಡುವವರ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಸ್ಥಳ: ಚಿಕ್ಕೋಡಿ
ವರದಿ: ಅಜೀತ ಸಣ್ಣಕ್ಕಿ