ನೆಲಮಂಗಲ: ಪದೇ ಪದೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಮಳೆ ಹೆಚ್ಚಾಗಿದ್ದು, ಮಳೆಯಿಂದಾಗಿ ಅನೇಕ ಅವಘಡಗಳು ನಡೆಯುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ.
ಲಕ್ಕೇನಹಳ್ಳಿ ಗ್ರಾಮದಲ್ಲೂ ಸಹ ರಂಗಸ್ವಾಮಯ್ಯ ಎಂಬುವರ ಮನೆ ಬಿದ್ದಿದೆ, ನೆಲಮಂಗಲ ತಾಲೂಕಿನ ವಿವಿಧ ಗ್ರಾಮದಲ್ಲಿ ಅನಾಹುತ ಹೆಚ್ಚಾಗಿದೆ. ಅರೆಬೊಮ್ಮನಹಳ್ಳಿ, ತಿಮ್ಮಸಂದ್ರ, ಕೊಡಗಿಬೊಮ್ಮನಹಳ್ಳಿ, ಸೂಲ್ಕುಂಟೆ, ಮೆಳೆಕತ್ತಿಗನೂರು ಗ್ರಾಮದಲ್ಲಿ ಸುಮಾರು 10 ಮನೆಗಳು ಬಿದ್ದಿವೆ. ನಿರಂತರ ಮಳೆಯಿಂದಾಗಿ ಹಳೆಯ ಮನೆಗಳು ನೆಲಸಮವಾಗಿದ್ದು, ಮಳೆ ನಿಂತರೆ ಸಾಕಾಪ್ಪಾ ಎನ್ನುವ ಪರಿಸ್ಥಿತಿ ಬಂದಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಮನೆ ಕುಸಿದಿದ್ದರಿಂದ ಬೀದಿಗೆ ಬಿದ್ದ ಕುಟುಂಬಗಳ ನೋವು ಹೆಚ್ಚಾಗಿದೆ. ಮನೆ ಕುಸಿದಿರುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.