ಚಿತ್ರದುರ್ಗ: ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ಮತಾಂತರದ ಕುರಿತು ಮಾತನಾಡಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ. ಹೊಸದುರ್ಗ ಕ್ಷೇತ್ರದಲ್ಲಿ 18-20 ಸಾವಿರ ಜನರನ್ನು ಮತಾಂತರ ಮಾಡಲಾಗಿದೆ. ಕ್ರಿಶ್ಚಿಯನ್ ಮಿಷನರಿಗಳಲ್ಲಿ ಬ್ರೈನ್ ವಾಷ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈಗ ಅವರು ಫೇಸ್ ಬುಕ್ ನಲ್ಲಿ ಮತಾಂತರದ ವಿರುದ್ಧ ಪೋಸ್ಟ್ ಮಾಡಿದ್ದು, ಮತಾಂತರದ ವಿರುದ್ಧ ಹೋರಾಟ ಆರಂಭಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಮತಾಂತರ ಎಂಬ ಗಂಭೀರ ವಿಷಯದಲ್ಲಿ ಒಂದು ಸ್ಪಷ್ಟ ಸಮುದಾಯದ ವಿರುದ್ಧವಾಗಿ ನನ್ನ ಹೋರಾಟವಲ್ಲ. ಬದಲಾಗಿ ಒಂದು ಸಮುದಾಯದ ಪರವಾಗಿ ಮತಾಂತರ ಎಂಬ ಪಿಡುಗನ್ನು ಹರಡುತ್ತಿರುವ ಜನರ ವಿರುದ್ಧ ನನ್ನ ಹೋರಾಟ. ನಮ್ಮ ಭಾರತ ದೇಶದ ಸಂಸ್ಕೃತಿ ಉಳಿವಿಗಾಗಿ ನನ್ನ ಹೋರಾಟ. ಬೌದ್ದಿಕ ಮಟ್ಟದಲ್ಲಿ ಜನರನ್ನು ಬದಲಾಯಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ನನ್ನ ಹೋರಾಟ. ಹಾಗಾಗಿಯೇ, ಇಂತಹ ಪಿಡುಗಿಗೆ ಸಿಲುಕಿದ ನಮ್ಮ ಕುಟುಂಬದಿಂದಲೇ ಈ ಹೋರಾಟಕ್ಕೆ ನಾಂದಿ ಹಾಡಲು ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ.
ಗೂಳಿಹಟ್ಟಿ ಶೇಖರ್ ಅವರ ಫೇಸ್ ಬುಕ್ ಪೋಸ್ಟ್ ನ ಪೂರ್ಣ ಸಾರಾಂಶ
‘‘ಈ ಮತಾಂತರ ಎಂಬ ಪಿಡುಗಿನಿಂದ ನಾನು ಹಾಗೂ ನನ್ನ ಕುಟುಂಬದವರು ಅನುಭವಿಸುತ್ತಿರುವ ದುಖಃ, ನೋವು ಮತ್ತು ಸಂಕಟಗಳು ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ.
ನಮ್ಮ ಕುಟುಂಬಕ್ಕೆ ಆದ ಸಾವು ಎಂಬ ನಷ್ಟದಿಂದ ಮನಶಾಂತಿ ಪಡೆಯಲು ದೇವಾಲಯ, ಮಸೀದಿ ಮತ್ತು ಚರ್ಚ್ ಗಳಿಗೆ ತೆರಳುತ್ತಿದ್ದ ನನ್ನ ತಾಯಿಯನ್ನು ಮತಾಂತರಗೊಳಿಸಿದ್ದು ತಪ್ಪಲ್ಲವೇ?
ರಾಮ, ರಹೀಮ, ಕ್ರಿಸ್ತರೆಲ್ಲರೂ ದೇವರುಗಳು ಎಂದು ನಂಬಿದ್ದ ನನ್ನ ತಾಯಿಯನ್ನು ಬೌದ್ದಿಕವಾಗಿ ಮತಾಂತರ ಮಾಡಿರುವುದು ತಪ್ಪಲ್ಲವೇ?
ನನ್ನ ತಾಯಿ ಮನಶಾಂತಿಗಾಗಿ ದಾರಿ ಹುಡುಕುವ ವೇಳೆ, ಅವರ ಆಚಾರ ವಿಚಾರ ಮತ್ತು ಸಂಪ್ರದಾಯಗಳನ್ನು ಬದಲಾಯಿಸುವಂತೆ ಪ್ರೇರೇಪಿಸಿರುವುದು ತಪ್ಪಲ್ಲವೇ.?
ಮುಕ್ಕೋಟಿ ದೇವತೆಗಳನ್ನು ಪೂಜಿಸುವ ಹಾಗೂ ಎಲ್ಲ ದೇವರುಗಳು ಒಂದೇ ಎಂದು ನಂಬಿರುವ ಹಿಂದೂ ಸಂಪ್ರದಾಯದ ಜನತೆಗೆ ಬೌದ್ದಿಕವಾಗಿ ಒತ್ತಡ ಹೇರುತ್ತಿರುವುದು ತಪ್ಪಲ್ಲವೇ.?
ಹಿಂದೂ ಸಮಾಜವು ಸಾಮಾಜಿಕ ಸಂಕೋಲೆಗಳಿಂದ ಬಿಡುಗಡೆಗೊಳ್ಳುತ್ತಿರುವ ವೇಳೆ, ಕೆಲ ಸಮುದಾಯಗಳ ಮೇಲೆ ಮತ್ತೆ ಧರ್ಮಾಧಾರಿತ ವಿಭಿನ್ನ ಆಚರಣೆಗಳನ್ನು ಹೇರುತ್ತಿರುವುದು ತಪ್ಪಲ್ಲವೇ.?
ಈ ಮತಾಂತರ ಎಂಬ ಗಂಭೀರ ವಿಷಯದಲ್ಲಿ ಒಂದು ಸ್ಪಷ್ಟ ಸಮುದಾಯದ ವಿರುದ್ಧವಾಗಿ ನನ್ನ ಹೋರಾಟವಲ್ಲ. ಬದಲಾಗಿ ಒಂದು ಸಮುದಾಯದ ಪರವಾಗಿ ಮತಾಂತರ ಎಂಬ ಪಿಡುಗನ್ನು ಹರಡುತ್ತಿರುವ ಜನರ ವಿರುದ್ಧ ನನ್ನ ಹೋರಾಟ. ನಮ್ಮ ಭಾರತ ದೇಶದ ಸಂಸ್ಕೃತಿ ಉಳಿವಿಗಾಗಿ ನನ್ನ ಹೋರಾಟ. ಬೌದ್ದಿಕ ಮಟ್ಟದಲ್ಲಿ ಜನರನ್ನು ಬದಲಾಯಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ನನ್ನ ಹೋರಾಟ. ಹಾ’ಗಾಗಿಯೇ, ಇಂತಹ ಪಿಡುಗಿಗೆ ಸಿಲುಕಿದ ನಮ್ಮ ಕುಟುಂಬದಿಂದಲೇ ಈ ಹೋರಾಟಕ್ಕೆ ನಾಂದಿ ಹಾಡಲು ಮುಂದಾಗಿದ್ದೇನೆ.’’