ಚಿಕ್ಕಮಗಳೂರು : ಮೂಡಿಗೆರೆ ಬಳಿ ಮರಕ್ಕೆ ಕಾರು ಡಿಕ್ಕಿಯಾಗಿದ್ದು, ಅಪ್ಪಂದಿರ ದಿನವೇ ಅಪ್ಪ ಮಗ ಧಾರುಣವಾಗಿ ಮೃತಪಟ್ಟಿದ್ದಾರೆ.
ನರಸಿಂಹರಾಜ್ (46) ಹಾಗೂ ಕಿರಣ್ (23) ಮೃತ ತಂದೆ-ಮಗ. ಇವರು ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸ್ಸಾಗುವಾಗ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಬಳಿ ಮರಕ್ಕೆ ಕಾರು ಡಿಕ್ಕಿಯಾಗಿದೆ.
ಅಪಘಾತದಲ್ಲಿ ಬೆಂಗಳೂರಿನ ರಾಜಾಜಿನಗರದ ತಂದೆ ಮಗ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗೂಡ್ಸ್ ಆಟೋದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಇಂದು ಬೆಳಗಿನ ಜಾವ ಹಾಸನ ಜಿಲ್ಲೆಯ ಆಲೂರು ಬಳಿ ಕ್ಯಾಂಟರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ತಂದೆ ಮಗ ಮೃತಪಟ್ಟಿದ್ದರು. ತಮಿಳುನಾಡು ಮೂಲದ ಆಂಜನಪ್ಪ ಮತ್ತು ಅವರ ಪುತ್ರ ಕಾರ್ತಿಕ್ ಮೃತಪಟ್ಟವರು. ಇನ್ನು ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.